ಬೆಂಗಳೂರು: ಹಿಂದೂಗಳ 25 ಅಂಗಡಿಗಳನ್ನು ಸುಟ್ಟು ಹಾಕಿದ್ದು ನಿಮಗೆ ಆಕಸ್ಮಿಕವೇ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಕಾಂಗ್ರೆಸ್ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಸಿಎಂ, ಸಚಿವರ ಮೇಲೂ ಭ್ರಷ್ಟಾಚಾರದ ದೂರುಗಳಿವೆ. ಇಷ್ಟೊಂದು ಕೆಟ್ಟ ಸರ್ಕಾರ ಎಂದು ಜನರು ಮಾತನಾಡುವ ಸಂದರ್ಭದಲ್ಲಿ ಅದನ್ನು ಮುಚ್ಚಿ ಹಾಕಲು ನೀವೇನಾದರೂ ಗಲಭೆ ಮಾಡುತ್ತಿದ್ದೀರಾ? ಎಂದು ನಾಗಮಂಗಲದ (Nagamangala) ಘಟನೆಯನ್ನು ಖಂಡಿಸಿದ್ದಾರೆ.
. ನಾಗಮಂಗಲದ ಘಟನೆಯಿಂದ ನಮ್ಮೆಲ್ಲ ಹಿಂದೂಗಳಿಗೆ ಅಪಮಾನ ಆಗಿದೆ. ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಚಪ್ಪಲಿ ಎಸೆದಿದ್ದಾರೆ. ಕಲ್ಲು ಎಸೆದಿದ್ದಾರೆ. ಅಲ್ಲದೆ ನಮ್ಮ ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಆದರೆ, ಇದೊಂದು ಚಿಕ್ಕ ಘಟನೆ ಎಂದು ಗೃಹ ಸಚಿವರು ಹೇಳಿದ್ದಾರೆ. ಅವರಿಗೆ ಇದಕ್ಕಿಂತಲೂ ದೊಡ್ಡ ಘಟನೆ ಆಗಬೇಕಿತ್ತೆ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯನವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳಿಗೆ ಅಪಮಾನ ಮಾಡುವಂತಹ ಕಾರ್ಯಗಳು ನಡೆಯುತ್ತಿದೆ. ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ಕಾಂಗ್ರೆಸ್ ಈ ರೀತಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.