14 ವರ್ಷ ಕಳೆದರೂ ಹಚ್ಚಹಸಿರಾಗಿದೆ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮ
ಸೆಪ್ಟಂಬರ್ 24.. 2007..ಸೋಮವಾರದ ಆ ದಿನ ಎಲ್ಲರಿಗೂ ನೆನಪಿರಬೇಕು.. ಜೊಹಾನ್ಸ್ಬರ್ಗ್ನ ವಾಂಡರರ್ಸ್ ಕ್ರೀಡಾಂಗಣ.. ಕಡು ಬದ್ಧ ವೈರಿಗಳ ಕದನ. ಅದಕ್ಕೆ ಕಿಚ್ಚು ಹತ್ತಿಸಿದ್ದು ಚೊಚ್ಚಲ ಟಿ20 ವಿಶ್ವಕಪ್ ಅನ್ನುವ ಮಾಯಾಜಾಲ. ಸುಮಾರು 14 ವರ್ಷಗಳ ಹಿಂದೆ ಅಂದರೆ 2007 ಸೆಪ್ಟೆಂಬರ್ 24ರಂದು ಟೀಮ್ ಇಂಡಿಯಾ ಕ್ರಿಕೆಟ್ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆದಿಟ್ಟಿತ್ತು. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಮ್ ಇಂಡಿಯಾ ಚೊಚ್ಚಲ ಆವೃತ್ತಿಯಲ್ಲೇ ಐಸಿಸಿ ಟಿ-20 ವಿಶ್ವಕಪ್ ಪ್ರಶಸ್ತಿ ಜಯಿಸಿತು. ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ನಡೆದ ಟಿ-20 ವಿಶ್ವಕಪ್ ಫೈನಲ್ನಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿ ಚೊಚ್ಚಲ ಟ್ರೋಫಿ ಗೆದ್ದಿತ್ತು. ಎಂಎಸ್ ಧೋನಿ ಯುಗ ಆರಂಭವಾಗಿದ್ದೂ ಆ ದಿನದಿಂದಲೇ.
ಧೋನಿ ನಾಯಕತ್ವದಲ್ಲಿ ಯುವ ಟೀಮ್ ಇಂಡಿಯಾ ಚೊಚ್ಚಲ ಟಿ-20 ವಿಶ್ವಕಪ್ ಆಡಲು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿತ್ತು. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಮ್ ಇಂಡಿಯಾ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿದ್ದರಿಂದ, ಧೋನಿ ಪಡೆಯ ಮೇಲೆ ಅಷ್ಟೇನು ನಿರೀಕ್ಷೆಗಳಿರಲಿಲ್ಲ.
ಟಿ-20 ವಿಶ್ವಕಪ್ ಟೂರ್ನಿಗೂ ಮುನ್ನ ಕೇವಲ ಒಂದು ಟಿ-20 ಪಂದ್ಯವನ್ನಾಡಿದ್ದ ಸೆಹ್ವಾಗ್, ಯುವರಾಜ್ ಸಿಂಗ್, ಧೋನಿ ಹೊರತುಪಡಿಸಿ ಉಳಿದವರಿಗೆ ಯಾವುದೇ ಅಂತರರಾಷ್ಟ್ರೀಯ ಟಿ-20 ಪಂದ್ಯವನ್ನಾಡಿದ ಅನುಭವವಿರಲಿಲ್ಲ. ಆದರೆ, ತಂಡದ ಸಂಘಟಿತ ಪ್ರದರ್ಶನದ ನೆರವಿನಿಂದ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇತಿಹಾಸ ಬರೆದಿತ್ತು.
ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ 5 ರನ್ಗಳ ರೋಚಕ ಗೆಲುವಿನ ಸಂಭ್ರಮ ಆಚರಿಸಿತ್ತು. ಟೀಮ್ ಇಂಡಿಯಾ 20 ಓವರ್ಗೆ 5 ವಿಕೆಟ್ ನಷ್ಟದಲ್ಲಿ 157 ರನ್ ಮಾಡಿತ್ತು. ಗುರಿ ಬೆನ್ನಟ್ಟಿದ ಪಾಕಿಸ್ತಾನ, ಇನ್ನೇನು ಗೆದ್ದೇ ಬಿಡ್ತು ಅನ್ನುವಾಗ 19.3ನೇ ಓವರ್ಗೆ 152 ರನ್ಗಳಿಗೆ ಆಲೌಟ್ ಆಗಿತ್ತು. ಎಲ್ಲೋ ಇದ್ದ ಧೋನಿ ನಾಯಕನಾಗಿ ಮಿಂಚಿದ್ದರು. ಧೋನಿ ಯುಗ ಆರಂಭವಾಗಿತ್ತು. ಸಚಿನ್, ಸೌರವ್, ದ್ರಾವಿಡ್ ಮತ್ತು ಲಕ್ಷ್ಮಣ್ ಮೇಲಿದ್ದ ಜವಾಬ್ದಾರಿಯಷ್ಟೇ ಧೋನಿ ಹೆಗಲಿನ ಮೇಲಿತ್ತು. ಇದಾದ ಮೇಲೆ ಧೋನಿ ಸಾಧಿಸಿದ್ದಕ್ಕೆ ಲೆಕ್ಕವೇ ಇಲ್ಲ. ಗೆಲ್ಲದ ಟ್ರೋಫಿಗಳಿಲ್ಲ. ಒಟ್ಟಿನಲ್ಲಿ ಧೋನಿ ನಾಯಕತ್ವಕ್ಕೆ ಹುಟ್ಟು ಹಾಕಲು ಆರಂಭಿಸಿದ್ದೇ ಈ ದಿನ.









