ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ ಸಂಪೂರ್ಣ ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ
ಹೊಸದಿಲ್ಲಿ, ಸೆಪ್ಟೆಂಬರ್02: ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ತೆಗೆದುಹಾಕಿದೆ.
ಜಾಗತಿಕವಾಗಿ ತೈಲ ಬೆಲೆಗಳ ಕುಸಿತ ಮತ್ತು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಆಗಾಗ್ಗೆ ಏರಿಕೆ ಇರುವುದರಿಂದ ದೇಶೀಯ ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡುವ ಅಗತ್ಯವನ್ನು ಸರ್ಕಾರ ಸಂಪೂರ್ಣವಾಗಿ ತೆಗೆದುಹಾಕಿದೆ. ಸಾಮಾನ್ಯ ಜನರ ಇಂಧನದ ಬೆಲೆಯನ್ನು ಮಾರುಕಟ್ಟೆ ದರಗಳಿಗೆ ಹತ್ತಿರ ತಂದಿದೆ. ಇನ್ನು ಮುಂದೆ ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.
ಸೆಪ್ಟೆಂಬರ್ 1 ರಿಂದ, ಸಬ್ಸಿಡಿ ಮತ್ತು ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲದ ಬೆಲೆ ಸಿಲಿಂಡರ್‌ಗೆ 594 ರೂ. ನಿಗದಿ ಪಡಿಸಲಾಗಿದೆ. ಸರ್ಕಾರವು ಇನ್ನು ಮುಂದೆ ನೇರ ಲಾಭ ವರ್ಗಾವಣೆ ಯೋಜನೆ (ಡಿಬಿಟಿ) ಅಡಿಯಲ್ಲಿ ಸಬ್ಸಿಡಿಯನ್ನು ಫಲಾನುಭವಿಗಳ ಖಾತೆಗೆ ಪಾವತಿಸುವುದಿಲ್ಲ.
ವಾಸ್ತವವಾಗಿ, ಈ ವರ್ಷದ ಆರಂಭದಿಂದ ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಅಡುಗೆ ಅನಿಲದ ನಡುವಿನ ಬೆಲೆಯ ಅಂತರವು ಕಡಿಮೆಯಾಗುತ್ತಿರುವುದರಿಂದ, ಸರ್ಕಾರವು ಕಳೆದ ನಾಲ್ಕು ತಿಂಗಳುಗಳಿಂದ ಯಾವುದೇ ಫಲಾನುಭವಿಗಳ ಖಾತೆಗಳಿಗೆ ಯಾವುದೇ ನಗದು ವರ್ಗಾವಣೆಯನ್ನು ಮಾಡಿಲ್ಲ.
2021 ಕ್ಕೆ ಸರ್ಕಾರ ಪೆಟ್ರೋಲಿಯಂ ಸಬ್ಸಿಡಿಯಾಗಿ 40,915 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಕಳೆದ ಹಣಕಾಸು ವರ್ಷದಲ್ಲಿ ನಿಗದಿಪಡಿಸಿದ 38,569 ಕೋಟಿ ರೂ.ಗಳಿಂದ ಶೇ 6 ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಎಲ್‌ಪಿಜಿ ಸಬ್ಸಿಡಿ ಹಂಚಿಕೆಯನ್ನು ಪ್ರಸಕ್ತ ವರ್ಷದಲ್ಲಿ 37,256.21 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಕುಸಿತಕ್ಕೆ ಜಾಗತಿಕ ತೈಲ ಮಾರುಕಟ್ಟೆಗಳು ಬಹುಮಟ್ಟಿಗೆ ಕಾರಣವಾಗಿದ್ದರೂ, ತೈಲ ಕಂಪನಿಗಳು ಸಬ್ಸಿಡಿ ಪಡೆದ ಅಡುಗೆ ಅನಿಲದ ಬೆಲೆಯನ್ನು ಕಳೆದ ಜುಲೈನಲ್ಲಿ 494.35 ರೂ.ಗಳ ಸಿಲಿಂಡರ್‌ನಿಂದ ಸ್ಥಿರವಾಗಿ 594 ರೂ.ಗೆ ಏರಿಸಿದೆ. ಈ ಹೆಚ್ಚಳವು ಸಂಭವಿಸದಿದ್ದರೆ, 14.2 ಕೆಜಿ ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆ 100 ರೂಗಳಿಗಿಂತ ಹೆಚ್ಚು ಅಗ್ಗವಾಗುತ್ತಿತ್ತು.
ಭಾರತದಲ್ಲಿ ಸುಮಾರು 27.76 ಕೋಟಿ ಎಲ್‌ಪಿಜಿ ಗ್ರಾಹಕರು ಇದ್ದಾರೆ. ಈ ಪೈಕಿ ಸುಮಾರು 1.5 ಕೋಟಿ ಜನರ ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚಿರುವ ಹಿನ್ನೆಲೆಯಲ್ಲಿ 2016 ರ ಡಿಸೆಂಬರ್‌ನಿಂದ ಎಲ್‌ಪಿಜಿ ಸಬ್ಸಿಡಿ ಪಡೆಯಲು ಅರ್ಹರಾಗಿಲ್ಲ.
ಕರ್ನಾಟಕದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಗ್ರಾಹಕರು (ಐಒಸಿಎಲ್) 62.27 ಲಕ್ಷ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (ಎಚ್‌ಪಿಸಿಎಲ್) ಗ್ರಾಹಕರು 48.83 ಲಕ್ಷ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ( ಬಿಪಿಸಿಎಲ್) ಗ್ರಾಹಕರು 35.59 ಲಕ್ಷ ಮಂದಿ ಎಲ್‌ಪಿಜಿ ಸಂಪರ್ಕ ಹೊಂದಿದ್ದಾರೆ. ಅಲ್ಲದೆ, ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಐಒಸಿಎಲ್‌ನ 13,93,748 ಗ್ರಾಹಕರು, ಬಿಪಿಸಿಎಲ್‌ನ 7,40,897 ಗ್ರಾಹಕರು ಹಾಗೂ ಎಚ್‌ಪಿಸಿಎಲ್‌ನ 10,11,042 ಗ್ರಾಹಕರು ಎಲ್‌ಪಿಜಿ ಸಂಪರ್ಕ ಪಡೆದಿದ್ದಾರೆ.








