ಅಸಮರ್ಥ ಮತ್ತು ಭ್ರಷ್ಟ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಕೇಂದ್ರ ಸರ್ಕಾರ
ಹೊಸದಿಲ್ಲಿ, ಅಗಸ್ಟ್31: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 30 ವರ್ಷಗಳ ಸೇವೆ ಪೂರ್ಣಗೊಳಿಸಿರುವ ಎಲ್ಲ ಉದ್ಯೋಗಿಗಳ ಸೇವಾ ದಾಖಲೆ ಪರಿಶೀಲಿಸುವ ಮೂಲಕ ಅದಕ್ಷ, ಅಸಮರ್ಥ ಮತ್ತು ಭ್ರಷ್ಟ ಉದ್ಯೋಗಿಗಳನ್ನು ಪತ್ತೆ ಹಚ್ಚಿ, ಅವಧಿ ಪೂರ್ವ ನಿವೃತ್ತಿ ನೀಡುವ ಖಡಕ್ ತೀರ್ಮಾನ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ಸೇವಾ ದಾಖಲೆ ಪರಿಶೀಲಿಸಲು ತನ್ನ ಎಲ್ಲ ಇಲಾಖೆಗಳಿಗೆ ಕೇಂದ್ರ ಸಿಬ್ಬಂದಿ ಇಲಾಖೆ ಆದೇಶ ಹೊರಡಿಸಿದೆ ಮತ್ತು ಆದೇಶದ ಪ್ರತಿಯನ್ನು ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಈಗಾಗಲೇ ಕಳುಹಿಸಿಕೊಡಲಾಗಿದೆ.
ಉದ್ಯೋಗಿಗಳ ಕಾರ್ಯಕ್ಷಮತೆ ವಿಮರ್ಶೆಯನ್ನು 1972ರ 48 (1) (ಬಿ) ಅಡಿಯ ಸಿಸಿಎಸ್ (ಪಿಂಚಣಿ) ನಿಯಮಗಳ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.
ಈ ನಿಯಮಗಳ ಪ್ರಕಾರ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ನಿರ್ದಿಷ್ಟ ಸರ್ಕಾರಿ ನೌಕರರಿಗೆ ಅವಧಿಪೂರ್ವ ನಿವೃತ್ತಿ ನೀಡುವ ವಿವೇಚನಾಧಿಕಾರ ಆಯಾ ಇಲಾಖೆ ಹೊಂದಿರುತ್ತದೆ. ಉತ್ಸಾಹಿ, ತಂತ್ರಜ್ಞಾನ ಪ್ರೇರಿತ ಮತ್ತು ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸುವ ಯುವಕರನ್ನು ಸರ್ಕಾರಿ ಸೇವೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಉದ್ಯೋಗದಲ್ಲಿ ಸಾಮರ್ಥ್ಯ, ದಕ್ಷತೆ ಪ್ರದರ್ಶಿಸಿ, ಇಲ್ಲದಿದ್ದರೆ ಮನೆಗೆ ಹೋಗಲು ಸಿದ್ಧರಾಗಿ ಎಂಬ ಖಡಕ್ ಸಂದೇಶ ರವಾನಿಸಿತ್ತು. ಕೇಂದ್ರದ ವಿವಿಧ ಸಚಿವಾಲಯಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತಂದು ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಹಾಜರಿರುವಂತೆ ನೋಡಿಕೊಳ್ಳಲಾಗಿತ್ತು.
ಆದೇಶದ ಪ್ರಕಾರ 1972ರ 48 (1) (ಬಿ) ಅಡಿಯ ಸಿಸಿಎಸ್ (ಪಿಂಚಣಿ) ನಿಯಮಗಳ ವ್ಯಾಪ್ತಿಯಡಿಯಲ್ಲಿ 30 ವರ್ಷಗಳ ಸೇವೆ ಪೂರ್ಣಗೊಳಿಸಿದ ಸಿಬ್ಬಂದಿ ಸೇವಾ ವಿಮರ್ಶೆಗೆ ಒಳಪಡಲಿದ್ದಾರೆ. ಕೇಂದ್ರ ಅವರನ್ನು ಅವಧಿ ಪೂರ್ವ ನಿವೃತ್ತಿಗೊಳಿಸಿದರೂ, ಅವರು ನಿವೃತ್ತಿ ನಂತರದ ಪಿಂಚಣಿಗೆ ಅರ್ಹರಾಗಿರುತ್ತಾರೆ. ಉದ್ಯೋಗಿಗಳ ಸೇವಾ ದಾಖಲೆ ಪರಿಶೀಲಿಸಲು ಅನುಸರಿಸಬೇಕಿರುವ ಮಾನದಂಡಗಳನ್ನೂ ಸಹ ಆದೇಶದಲ್ಲಿ ತಿಳಿಸಲಾಗಿದೆ. ಅವರು ಹುದ್ದೆಯಲ್ಲಿ ಮುಂದುವರಿಯಲು ಎಷ್ಟು ಸಮರ್ಥರಿದ್ದಾರೆ ಎಂಬುದನ್ನು ಪರಿಗಣಿಸಿ, ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು.








