ಬೆಂಗಳೂರು : ಪಕ್ಷದ ರಾಜ್ಯ ಮಟ್ಟದ ಅಥವಾ ಬ್ಲಾಕ್ ಮಟ್ಟದ ಸಮಿತಿಯಲ್ಲಿ ಪದಾಧಿಕಾರಿಗಳ ಬದಲಾವಣೆ ಸದ್ಯಕ್ಕಿಲ್ಲ. ಈ ಬಗ್ಗೆ ಯಾರಾದರೂ ಬಹಿರಂಗ ಹೇಳಿಕೆಗಳನ್ನು ನೀಡಿದರೆ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವಾಗಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಮನವಿ, ಯಾರೂ ಸಹ ಗೊಂದಲ ಮಾಡಿಕೊಳ್ಳುವುದು ಬೇಡ, ಯಾರನ್ನೂ ಬದಲಾವಣೆ ಮಾಡುವ ಸಂದರ್ಭ ಇಲ್ಲ. ಈಗ ಇರುವ ರಾಜ್ಯ ಮಟ್ಟದ, ಬ್ಲಾಕ್ ಮಟ್ಟ ಸಮಿತಿ ಕೂಡಾ ಚುನಾವಣೆಯಲ್ಲಿ ಆಯ್ಕೆ ಆಗಿರುವಂಥದ್ದು. ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಇಲ್ಲದೆ ಅಥವಾ ಅವರ ಗಮನಕ್ಕೆ ತಾರದೆ ಪದಾಧಿಕಾರಿಗಳ ಬದಲಾವಣೆ ಮಾಡುವ ಆಲೋಚನೆ ಇಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಪಕ್ಷದಲ್ಲಿ ಮೊದಲು ಒಗ್ಗಟ್ಟು ಮೂಡಿಸಬೇಕು ಹಾಗೂ ಬೂತ್ ಮಟ್ಟದ ಸಮಿತಿಗಳನ್ನು ರಚಿಸಬೇಕು. ಈ ಕೆಲಸಕ್ಕೆ ನಾವೆಲ್ಲಾ ಮುಂದಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವ ಟ್ರಬಲ್ ಶೂಟರ್, ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ನಾವು ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಿದ್ದೇವೆ. ಹಾಗಾಗಿ ಯಾವುದೇ ಹೊಸ ಬದಲಾವಣೆಗಳು ಇರುವುದಿಲ್ಲ. ಈಗ ಇರುವವರನ್ನು ತೆಗೆಯುವುದಾಗಲೀ, ಹೊಸಬರನ್ನು ನೇಮಕ ಮಾಡುವಂತಹ ಯಾವುದೇ ಆಲೋಚನೆಗಳೂ ಇಲ್ಲ ಎಂದಿದ್ದಾರೆ.
ಅಲ್ಲದೆ ಹೊಸ ಬದಲಾವಣೆಗೆ ಸಂಬಂಧಿಸಿದಂತೆ ಯಾರಾದರೂ ಬಹಿರಂಗ ಹೇಳಿಕೆಗಳನ್ನು ನೀಡಿದರೆ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇದನ್ನು ಎಚ್ಚರಿಕೆ ಎಂದಾದರೂ ಗಮನದಲ್ಲಿಟ್ಟುಕೊಳ್ಳಿ ಅಥವಾ ಮನವಿ ಎಂದು ಪರಿಗಣಿಸಿ. ಪಕ್ಷದಲ್ಲಿ ಶಿಸ್ತು ಕಾಪಾಡಿಕೊಳ್ಳಿ ಎಂದು ಡಿ.ಕೆ ಶಿವಕುಮಾರ್, ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.








