ಜಮಾವಣೆಯಾದ ಸ್ಥಳದಿಂದ ಪರಸ್ಪರ ಹಿಂದೆ ಸರಿದ ಭಾರತ ಚೀನಾ ಸೇನೆಗಳು

ಹೊಸದಿಲ್ಲಿ, ಜೂನ್ 9: ನಾಳೆ ನಡೆಯಲಿರುವ ಮುಂದಿನ ಸುತ್ತಿನ ಮಿಲಿಟರಿ ಮಾತುಕತೆಗೆ ಮುಂಚಿತವಾಗಿ ಪೂರ್ವ ಮತ್ತು ಲಡಾಖ್ನ ಕೆಲವು ಪ್ರದೇಶಗಳಲ್ಲಿ ಜಮಾವಣೆಗೊಂಡಿರುವ ಭಾರತೀಯ ಮತ್ತು ಚೀನಾದ ಸೈನಿಕರು ಹಿಂದೆ ಸರಿಯಲು ಪ್ರಾರಂಭಿಸಿದ್ದಾರೆ ಎಂದು ಸರ್ಕಾರದ ಮೂಲಗಳು ಮಂಗಳವಾರ ತಿಳಿಸಿವೆ.
ಪೂರ್ವ ಲಡಾಖ್ನ ‘ಹಾಟ್ ಸ್ಪ್ರಿಂಗ್ಸ್’ ಪ್ರದೇಶದಲ್ಲಿ ಬುಧವಾರ ಉನ್ನತ ಮಿಲಿಟರಿ ಮಾತುಕತೆ ನಡೆಯಲಿದೆ.
ಅದಕ್ಕಿಂತ ಮುಂಚಿತವಾಗಿ, ಗಮನಾರ್ಹ ಸಂಖ್ಯೆಯ ಚೀನಾದ ಪಡೆಗಳು 2 ರಿಂದ 3 ಕಿ.ಮೀ.ಗಳಷ್ಟು ಹಿಂದೆ ಸರಿದಿದೆ ಎಂದು ಹೇಳಲಾಗುತ್ತಿದೆ. ಪೆಟ್ರೋಲಿಂಗ್ ಪಾಯಿಂಟ್ 14 (ಗಾಲ್ವಾನ್ ಪ್ರದೇಶ), ಪೆಟ್ರೋಲಿಂಗ್ ಪಾಯಿಂಟ್ 15, ಮತ್ತು ಹಾಟ್ ಸ್ಪ್ರಿಂಗ್ಸ್ ಪ್ರದೇಶ ಸೇರಿದಂತೆ ಅನೇಕ ಸ್ಥಳಗಳಲ್ಲಿ ಜಮಾವಣೆಗೊಂಡಿದ್ದ ಸೇನಾಪಡೆಗಳು ಹಿಂದಕ್ಕೆ ಸರಿದಿದೆ.

ಚೀನಾದೊಂದಿಗಿನ ದಶಕಗಳಷ್ಟು ಹಳೆಯ ಗಡಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ಭಾರತ ಬಯಸಿದೆ ಎಂದು ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪೂರ್ವ ಲಡಾಕ್ ನಲ್ಲಿ ಉಭಯ ರಾಷ್ಟ್ರಗಳ ನಡುವೆ ಕಳೆದ ವಾರ ನಡೆದ ಉನ್ನತ ಮಟ್ಟದ ಮಿಲಿಟರಿ ಸಂವಾದವನ್ನು ಅವರು ಸಕಾರಾತ್ಮಕ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ಭಾರತದ ಕಮಾಂಡಿಂಗ್ ಜನರಲ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಅವರು ಚೀನಾದ ಕಮಾಂಡರ್ ಮೇಜ್ ಜನರಲ್ ಲಿಯು ಲಿನ್ ಅವರೊಂದಿಗೆ ಶನಿವಾರ ಸಭೆ ನಡೆಸಿದ್ದರು.








