ಬೆಂಗಳೂರು: ನಾವು ಆ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಮಾಡಿದೇವು. ಆದರೆ, ನಮ್ಮ ಅವಶ್ಯಕತೆ ಅವರಿಗೆ ಇಲ್ಲ ಎಂಬಂತೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಮುಸ್ಲಿಂ ಮತದಾರರ ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಬೇಸರ ಹೊರ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಾಂಪ್ರದಾಯಿಕ ಮತಗಳು 87 ಸಾವಿರಕ್ಕೆ ಏರಿಕೆಯಾಗಿವೆ. ಯಾರೂ ನಮ್ಮನ್ನು ಕೈ ಬಿಟ್ಟಿಲ್ಲ. ಆದರೆ, ಒಂದು ಸಮುದಾಯದ ಪರವಾಗಿ ದೇವೇಗೌಡರು ಹಿಂದೆ ನಿರ್ಣಯ ಕೈಗೊಂಡಿದ್ದರು. ಮೀಸಲಾತಿ ವಿಚಾರದ ಬಗ್ಗೆಯೂ ತೀರ್ಮಾನ ಮಾಡಿದ್ದರು. ಹೀಗಾಗಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದೇವು. ಆದರೆ ನಮ್ಮ ಅವಶ್ಯಕತೆ ಅವರಿಗೆ ಇಲ್ಲ ಅಂತ ಆ ಸಮುದಾಯ (Muslim community) ನಿನ್ನೆ ಸ್ಪಷ್ಟ ಸಂದೇಶ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಬೇರೆ ಸಮುದಾಯಗಳನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೋ ಆ ರೀತಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ದೇವೇಗೌಡರು ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಿಲ್ಲ. ಅವರ ವಯಸ್ಸು 92, ದೇಶ, ರಾಜ್ಯ ಕಟ್ಟಲು ಅವರ ಮಾರ್ಗದರ್ಶನ ಬೇಕು ಅಂತ ಅನೇಕ ವೇಳೆ ಪ್ರಧಾನಿಯವರೇ ಹೇಳಿದ್ದಾರೆ. ಇಲ್ಲಿ ಅಧಿಕಾರದ ದಾಹಕ್ಕೆ, ಅಧಿಕಾರಕ್ಕೆ ಅಂಟಿಕೊಂಡು ದೇವೇಗೌಡರು ರಾಜಕಾರಣ ಮಾಡುತ್ತಿಲ್ಲ. ಅವರಿಗೆ ನಿವೃತ್ತಿ ನೀಡುವುದನ್ನು ರಾಜ್ಯದ ಜನರು ತೀರ್ಮಾನಿಸುತ್ತಾರೆ ಎಂದಿದ್ದಾರೆ.








