ರಾಮನ ಅಸ್ತಿತ್ವವನ್ನು ಪ್ರಶ್ನಿಸಿದ ಕಾಂಗ್ರೆಸ್ ಭೂಮಿ ಪೂಜಾಗೆ ಆಹ್ವಾನಿಸಿಲ್ಲ ಎನ್ನುವುದು ಎಷ್ಟು ಸರಿ- ಬಿಜೆಪಿ
ಅಯೋಧ್ಯೆ, ಜುಲೈ 31: ಅಯೋಧ್ಯೆಯ ರಾಮ್ ಮಂದಿರ್ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಪಕ್ಷವನ್ನು ಆಹ್ವಾನಿಸದ ಕಾರಣಕ್ಕಾಗಿ ಕಾಂಗ್ರೆಸ್, ರಾಮ್ ಮಂದಿರ ಟ್ರಸ್ಟ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಕಾರ್ಯಕ್ರಮವನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ಸಮಾರಂಭವನ್ನಾಗಿ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ ರಾಮ್ ಮಂದಿರದ ಕ್ರೆಡಿಟ್ ಅನ್ನು ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ರಾಮ ಮಂದಿರ ನಿರ್ಮಾಣವು ಈ ಹಂತ ತಲುಪಲು ಕಾಂಗ್ರೆಸ್ ಕೂಡ ಮುಖ್ಯ ಕಾರಣವಾಗಿದ್ದು, ಕಾಂಗ್ರೆಸ್ ಗೂ ಆಮಂತ್ರಣ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭೂಮಿ ಪೂಜಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿ.ಜೆ.ಪಿ ಹಿರಿಯ ನಾಯಕರಾದ, ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ್ ಭೈಯಾಜಿ ಜೋಶಿ ಅವರನ್ನು ರಾಮ್ ಜನಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನಿಸಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಜಿಎಲ್‌ವಿ ನರಸಿಂಹ ರಾವ್, ಕಾಂಗ್ರೆಸ್ ನ ಆರೋಪಕ್ಕೆ ತಿರುಗೇಟು ನೀಡಿದ್ದು ಅರೆ, ಇದ್ಯಾಕೆ ಈಗ ಆರೋಪ ? ಕಾಂಗ್ರೆಸ್ ಪಕ್ಷ ಶ್ರೀರಾಮಚಂದ್ರನ ಅಸ್ತಿತ್ವವೇ ಇಲ್ಲವೆಂದು ಹೇಳಿತ್ತು. ಈಗ ಏಕೆ ಆಹ್ವಾನಿಸಿಲ್ಲ ಎಂದು ಆರೋಪ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಸುದೀರ್ಘ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷ ಎಷ್ಟೋ ದಶಕಗಳ ಕಾಲ ಅಧಿಕಾರದಲ್ಲಿತ್ತು. ಆದರೆ ಶ್ರೀರಾಮ್ ಮಂದಿರ್ ನಿರ್ಮಾಣಕ್ಕೆ ಬೇಕಾದ ಯಾವ ಪ್ರಯತ್ನಗಳನ್ನು ಮಾಡಲಿಲ್ಲ. ಅಷ್ಟೇ ಅಲ್ಲ ಧ್ವಂಸಗೊಂಡಿದ್ದ ಬಾಬರಿ ಮಸೀದಿಯನ್ನು ಮರುಸ್ಥಾಪಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಒಲವು ತೋರಿತ್ತು. ಇದೀಗ ಇದೇ ಕಾಂಗ್ರೆಸ್ ನಮ್ಮನ್ನು ಆಹ್ವಾನಿಸಿಲ್ಲ ಎಂದು ಆರೋಪಿಸುವುದು ಎಷ್ಟು ಸರಿ ಎಂದು ಜಿಎಲ್‌ವಿ ನರಸಿಂಹ ರಾವ್ ಪ್ರಶ್ನಿಸಿದ್ದಾರೆ.