ಹುಬ್ಬಳ್ಳಿ : ಕೊರೊನಾ ಕಿಟ್ ಖರೀದಿಯಲ್ಲಿ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಹಗರಣ ಮಾಡಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಭ್ರಷ್ಟಾಚಾರದಲ್ಲೇ ಮಿಂದೆದ್ದಿರುವ ಪಕ್ಷವಾಗಿದೆ ಎಂದು ಕುಟುಕಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರದ್ದು ಭ್ರಷ್ಟಾಚಾರದಲ್ಲಿ ಮಿಂದೆದ್ದಿರುವ ಪಕ್ಷವಾಗಿದೆ. ಕೆಲಸವಿಲ್ಲದೆ ಸರ್ಕಾರದ ಬಗ್ಗೆ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ನವರು ಒಂದು ಕುಟುಂಬದ ನೆರಳಲ್ಲಿ ಇರುವವರು. ಆರೋಪವಿದ್ದರೆ ಎಸಿಬಿ, ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದು ಸವಾಲ್ ಹಾಕಿದರು. ಈಗ ಬಹಳ ಪಾರದರ್ಶಕ ವ್ಯವಸ್ಥೆ ಇದೆ. ತಪ್ಪು ಮಾಡಿದವರು ಜೈಲಿಗೆ ಹೋಗುತ್ತಾರೆ ಎಂದ ಕೇಂದ್ರ ಸಚಿವರು, ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಗೆ ಮುಂದೆ ಬರಬೇಕು. ವೈದ್ಯರನ್ನು ಬೆದರಿಸಿ ಚಿಕಿತ್ಸೆ ಕೊಡಿಸುವುದು ಸೂಕ್ತವಲ್ಲ. ಖಾಸಗಿ ವೈದ್ಯರು ಸಂಕಷ್ಟದ ಸ್ಥಿತಿಯಲ್ಲಿ ಸಹಾಯಕ್ಕೆ ಬರಬೇಕು. ಇಲ್ಲದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಕೊರೊನಾ ನಿಯಂತ್ರಣದಲ್ಲಿ ಭಾರತ ವಿಶ್ವದಲ್ಲಿ ಯಶಸ್ವಿ ರಾಷ್ಟ್ರ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ಪರಿಸ್ಥಿತಿ ಅಷ್ಟೊಂದು ಹದಗೆಟ್ಟಿಲ್ಲ. ಲಾಕ್ ಡೌನ್ ನಿಂದ ಜನರಿಗೆ ಸಮಸ್ಯೆಯಗಿದ್ದು ನಿಜ. ಜುಲೈವರೆಗೆ ಒಂದು ಲಕ್ಷ ಹತ್ತು ಸಾವಿರ ಕೋಟಿ ರೂಪಾಯಿ ಸಾಲ ಕೊಟ್ಟಿದ್ದೇವೆ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.








