ಕೊರೊನಾ ಪ್ರಕರಣ – ರಷ್ಯಾವನ್ನು ಹಿಂದಿಕ್ಕಿದ ಭಾರತ
ಹೊಸದಿಲ್ಲಿ, ಜುಲೈ 6: ಕೋವಿಡ್ 19 ಇಂಡಿಯಾ.ಆರ್ಗ್ ಪ್ರಕಾರ, ಭಾರತವು ಭಾನುವಾರ ರಷ್ಯಾವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿ ಹೆಚ್ಚು ಕೊರೊನಾ ಸೋಂಕಿತ ರಾಷ್ಟ್ರವೆನಿಸಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ (ಜೆಎಚ್‌ಯು) ಪ್ರಕಾರ ರಷ್ಯಾದಲ್ಲಿ 6,80,283 ಪ್ರಕರಣಗಳು ವರದಿಯಾಗಿದ್ದರೆ, ಭಾರತದಲ್ಲಿ 6,90,396 ಪ್ರಕರಣಗಳು ದಾಖಲಾಗಿದೆ.
ಭಾರತದಲ್ಲಿ ಭಾನುವಾರ ದಾಖಲೆ ಮಟ್ಟದ ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ಬೆಳಿಗ್ಗೆ 8 ಗಂಟೆಯಿಂದ 24 ಗಂಟೆಗಳಲ್ಲಿ 24,850 ಹೊಸ ಪ್ರಕರಣಗಳನ್ನು ಪ್ರಕಟಿಸಿದೆ.
ಭಾರತಕ್ಕಿಂತ ಬ್ರೆಜಿಲ್ ಮತ್ತು ಯುಎಸ್ ನಲ್ಲಿ ಮಾತ್ರ ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕ್ರಮವಾಗಿ 2,841,124 ಮತ್ತು 1,577,004 ಪ್ರಕರಣಗಳನ್ನು ದಾಖಲಾಗಿದೆ.

ಆದಾಗ್ಯೂ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೆಹಲಿ, ಗುಜರಾತ್ ಮತ್ತು ಉತ್ತರ ಪ್ರದೇಶ ಸೇರಿದಂತೆ 21 ರಾಜ್ಯಗಳಲ್ಲಿ ಕೋವಿಡ್ -19 ಚೇತರಿಕೆ ಪ್ರಮಾಣವು ರಾಷ್ಟ್ರೀಯ ಸರಾಸರಿ ಶೇಕಡಾ 60.77 ಗಿಂತ ಹೆಚ್ಚಾಗಿದೆ ಎಂದು ಹೇಳಿದೆ. ಭಾರತ ಸರ್ಕಾರ ಕೊರೊನಾ ಸೋಂಕಿನ ವಿರುದ್ಧ ಕೈಗೊಂಡ ಕ್ರಮಗಳಿಂದಾಗಿ ಚೇತರಿಸಿಕೊಂಡ ಕೋವಿಡ್ ರೋಗಿಗಳ ಸಂಖ್ಯೆ ಇಲ್ಲಿಯವರೆಗೆ 4,09,082 ಕ್ಕೆ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ 24,850 ಹೊಸ ಕೊರೋನವೈರಸ್ ಪ್ರಕರಣಗಳು ಭಾರತದಲ್ಲಿ ವರದಿಯಾಗಿದೆ ಮತ್ತು ಇಲ್ಲಿಯವರೆಗಿನ ಸಾವಿನ ಸಂಖ್ಯೆ 19,268 ಕ್ಕೆ ಏರಿದೆ.








