ರೋಮ್, ಜೂನ್ 2 : ಇಟಲಿಯಲ್ಲಿ ಕೊರೊನಾ ವೈರಸ್ ನ ಪರಿಣಾಮ ಕಡಿಮೆಯಾಗುತ್ತಿದ್ದು, ಹಾನಿಯ ತೀವ್ರತೆ ಬಹಳಷ್ಟು ಕಡಿಮೆಯಾಗಿದೆ ಎಂದು ಇಟಲಿಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.
ಇಟಲಿಯಲ್ಲಿನ ಮಿಲನ್ ನಲ್ಲಿರುವ ಸ್ಯಾನ್ ರಾಫೆಲ್ ಆಸ್ಪತ್ರೆ ಮುಖ್ಯಸ್ಥ ಆಲ್ಬರ್ಟೊ ಜಾಂಗ್ರಿಲ್ಲೊ ಅವರು ನಿಜವಾಗಿ ಹೇಳಬೇಕೆಂದರೆ ಇಟಲಿಯಲ್ಲಿ ಈಗ ಕೊರೊನಾ ವೈರಸ್ ಅಸ್ತಿತ್ವದಲ್ಲೇ ಇಲ್ಲ. ಇದು ಕಳೆದ ಹತ್ತು ದಿನಗಳಲ್ಲಿ ನಡೆಸಲಾದ ಪರೀಕ್ಷೆ ಮತ್ತು ತಿಂಗಳ ಹಿಂದೆ ನಡೆಸಲಾದ ಪರೀಕ್ಷಾ ವರದಿಗಳನ್ನು ಹೋಲಿಸಿದಾಗ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಸೋಕಿತ ಪ್ರಕರಣಗಳು ದಾಖಲಾದ ದೇಶಗಳ ಪಟ್ಟಿಯಲ್ಲಿ ಇಟಲಿ ಮೂರನೇ ಸ್ಥಾನದಲ್ಲಿದೆ ಇಲ್ಲಿಯವರೆಗೆ ಇಟಲಿಯಲ್ಲಿ 2.33 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 33,415 ಮಂದಿ ಮೃತಪಟ್ಟಿದ್ದಾರೆ.
ಸೋಂಕಿನ ಎರಡನೇ ಅಲೆಯ ಬಗ್ಗೆ ಬಹಳಷ್ಟು ಎಚ್ಚರಿಕೆ ವಹಿಸಲಾಗುತ್ತಿದ್ದು, ಕೊರೊನಾದಿಂದಾಗಿ ಉಂಟಾಗಿರುವ ಹೊಸ ವಾಸ್ತವವನ್ನು ರಾಜಕಾರಣಿಗಳು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ ಎಂದ ಅವರು ದೇಶವನ್ನು ಸಹಜಸ್ಥಿತಿಗೆ ಮರಳಿ ತರಬೇಕಿದೆ ಎಂದು ಹೇಳಿದ್ದಾರೆ.








