ಮೈಸೂರು : ಈಗ ನಮ್ಮ ದೇಶದ ಪ್ರಧಾನಿ ನೆಹರು ಅಲ್ಲ, ನರೇಂದ್ರ ಮೋದಿ. ದೇಶ ಸಮರ್ಥ ನಾಯಕನ ಕೈಯಲ್ಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಲಡಾಖ್ ಗಡಿ ಪ್ರದೇಶದಲ್ಲಿ ನಡೆದ ಭಾರತ-ಚೀನಾ ಸೈನಿಕರ ಸಂಘರ್ಷದ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ 20 ಸೈನಿಕರು ಹುತಾತ್ಮರಾದ್ರೆ, ಚೀನಾದ 43 ಸೈನಿಕರನ್ನು ನಮ್ಮವರು ಸದೆಬಡೆದಿದ್ದಾರೆ. ಮೊದಲು ನಮ್ಮ ಹುತಾತ್ಮ ಸೈನಿಕರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಈಗ ಪ್ರಧಾನಿಯಾಗಿರುವುದು ನೆಹರು ಅಲ್ಲ, ಮೋದಿ. ನಮ್ಮ ದೇಶ ಎಲ್ಲದಕ್ಕೂ ಸಜ್ಜಾಗಿದೆ. ಸೈನಿಕರ ಆತ್ಮಸ್ಥೈರ್ಯ ಆಗಸದೆತ್ತರವಿದೆ ಎಂದರು.
ಇನ್ನು ನಮ್ಮ ದೇಶದೊಳಗಡೆ ನಮಗಿಂತ ಚೀನಾ ಶಕ್ತಿಶಾಲಿ ಎಂದು ಹೇಳುವ ಕೆಟ್ಟ ಮನಸ್ಥಿತಿಯ ಜನ ಇದ್ದಾರೆ. ಅವರಿಗೆ ನಮಗಿಂತ ಚೀನಾ ಬಗ್ಗೆಯೇ ಹೆಚ್ಚು ಪ್ರೀತಿ ಇದ್ದಂತಿದೆ. ಇಂತಹ ಮಾತುಗಳಿಗೆ ನಾವು ಬೆಲೆ ಕೊಡಬೇಕಾಗಿಲ್ಲ. ಗಡಿಯಲ್ಲಿ ಸಂಘರ್ಷ ಉಂಟಾದ ತಕ್ಷಣಕ್ಕೆ ಯುದ್ಧ ಎನ್ನುವ ಮನಸ್ಥಿತಿ ಬೇಡ. ಆದರೆ, ಯುದ್ಧಕ್ಕೂ ನಾವು ಸನ್ನದ ಎಂದ ಅವರು, ಸದ್ಯ ನಾವು ಅಣ್ವಸ್ತ್ರವನ್ನು ಹೊಂದಿದ್ದೇವೆ. ನಾವು ಶಕ್ತಿಶಾಲಿಗಳು, ಸಮರ್ಥ ನಾಯಕನ ಕೈಯಲ್ಲಿ ದೇಶವಿದೆ ಎಂದು ತಿಳಿಸಿದರು.
ಇದೇ ವೇಳೆ ಚೀನಾದ ವಿರುದ್ಧ ಕಿಡಿಕಾರಿದ ಅವರು, ಈ ಹಿಂದೆ ಚೀನಾ ಭಾರತದ ಗಡಿಯಲ್ಲಿ ಸಮಸ್ಯೆ ಉಂಟಾಗಿತ್ತು. ಆದರೆ, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ಚೀನಾದ ಕಪಿಚೇಷ್ಟೇ ಈಗಿಂದಲ್ಲ, ಈ ಹಿಂದಿನಿಂದಲೂ ಇದೆ. ಚೀನಾ ಯಾವ ದೇಶದ ಜೊತೆ ಚೆನ್ನಾಗಿದೆ ಹೇಳಿ. ಎಲ್ಲ ದೇಶದ ಜೊತೆ ಚೀನಾ ಈಗಾಗಲೇ ಕಿತಾಪತಿ ಮಾಡಿಕೊಂಡಿದೆ. ಹಾಗಾಗಿ ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.








