ಮಡಿಕೇರಿ : ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಆರು ದಿನಗಳ ನಂತರ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಪ್ರಪಾತದಲ್ಲಿ ಅರ್ಚಕ ನಾರಾಯಣಾಚಾರ್ ಆಚಾರ್ಯ ಅವರ ಮೃತದೇಹ ಪತ್ತೆಯಾಗಿದೆ. ಮಣ್ಣಿನಡಿ ಮೃತ ದೇಹ ಪತ್ತೆಯಾಗಿದ್ದು, ಸ್ಥಳಿಯ ಸರ್ಕಲ್ ಇನ್ಸ್ ಪೆಕ್ಟರ್, ಅರ್ಚಕ ನಾರಾಯಣಾಚಾರ್ ಆಚಾರ್ಯ ಮೃತದೇಹ ಎಂದು ಗುರುತು ಪತ್ತೆ ಮಾಡಿದ್ದಾರೆ.
ನಾರಾಯಣಾಚಾರ್ ಆಚಾರ್ಯ ಅವರ ಮೃತದೇಹ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಇತ್ತ ಆಪರೇಷನ್ ಬ್ರಹ್ಮಗಿರಿ ನಡೆಯುತ್ತಿರುವ ಸ್ಥಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಇನ್ನು ಆಪರೇಷನ್ ಬ್ರಹ್ಮಗಿರಿ ಕಾರ್ಯಾಚರಣೆ ವೇಳೆ ಇಂದು ಬೆಳಿಗ್ಗೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಮತ್ತು ಓಮ್ನಿ ಎರಡು ಕಾರುಗಳು ಪತ್ತೆಯಾಗಿದ್ದವು. ಜೊತೆಗೆ ಒಂದು ಬೈಕ್ ಮತ್ತು ನಾಯಿಯ ಮೃತದೇಹ ಪತ್ತೆಯಾಗಿತ್ತು.








