ಮೈಸೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ನೆಚ್ಚಿನ, ದಾಸನ ಭೇಟಿಯ ನಿರೀಕ್ಷೆಯಲ್ಲಿದ್ದ ಬಸವ ಇಂದು ನಸುಕಿನ ಜಾವ ವಿಧಿವಶವಾಗಿದೆ. ಮೈಸೂರು ಸಮೀಪದ ಕೆ.ಆರ್.ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮಸ್ಥರಿಗೆ ಊರ ದೈವವೇ ಆಗಿದ್ದ ಬಸವ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಬಸವನನ್ನು ಭೇಟಿ ಮಾಡಿದ್ದರು.
ಗ್ರಾಮಸ್ಥರೆಲ್ಲರೂ ದರ್ಶನ್ ಅವರು ಪುನಃ ಬಂದು ಭೇಟಿ ಮಾಡಿದರೆ ಬಸವ ಉಳಿಯುತ್ತಾನೆ ಎಂದು ದಚ್ಚು ಭೇಟಿಗೂ ಮನವಿ ಮಾಡಿದ್ದರು. ಆದರೆ ಕೊರೊನಾ ಲಾಕ್ ಡೌನ್ ನಿಂದಾಗಿ ದರ್ಶನ್ ಅವರಿಗೆ ಬಸವನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ದರ್ಶನ್ ಅವರ ಪರವಾಗಿ ಅವರ ಸ್ನೇಹಿತರು ಬಸವನಿಗೆ ಔಷಧಿಗಳನ್ನು ತರಿಸಿ ಕೊಟ್ಟಿದ್ದರು. ಆದರೆ ಇಂದು ಬೆಳಗಿನ ಜಾವ ಬಸವ ಮೃತಪಟ್ಟಿದೆ.
ದಚ್ಚು ಸ್ಪರ್ಶಕ್ಕೆ ಸ್ಪಂದಿಸಿದ್ದ ಬಸವ
2019 ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ಪರ ದರ್ಶನ್ ಪ್ರಚಾರ ಮಾಡಲು ಕೆ.ಆರ್.ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮಕ್ಕೆ ಹೋಗಿದ್ದರು. ಅಭಿಮಾನಿಗಳು ಸೇರಿದಂತೆ ಅಪಾರ ಜನಸ್ತೋಮ ಗ್ರಾಮದಲ್ಲಿ ನೆರೆದಿತ್ತು. ಆದರೆ ಪ್ರಚಾರದ ಮಾರ್ಗದಲ್ಲಿ ಬಂದ ಬಸವ ಗುಟುರು ಹಾಕಿ ಅಡ್ಡಿಯಾಗಿ ನಿಂತಿತ್ತು. ಇದರಿಂದ ಅಲ್ಲಿ ನೆರದಿದ್ದವರಲ್ಲಿ ಆತಂಕ ಮನೆ ಮಾಡಿತ್ತು.
ಈ ವೇಳೆ ಪ್ರಚಾರ ವಾಹನದಿಂದ ಕೆಳಗೆ ಇಳಿದು ಬಂದ ದರ್ಶನ್, ಪರಿಚಯವಿರದ ಬಸವನ ಮೈದಡವಿ ಸಮಾಧಾನ ಮಾಡಿದ್ದರು. ದರ್ಶನ್ ನಡವಳಿಕೆಗೆ ಸ್ಪಂದಿಸಿದ ಬಸವ ಶಾಂತವಾಗಿ ಅಲ್ಲಿಂದ ಮುಂದಕ್ಕೆ ಹೋಗಿತ್ತು. ಈ ಪ್ರಸಂಗ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಅಂದಿನಿಂದ ದರ್ಶನ್ ಜೊತೆಗೆ ಬಾಂಧವ್ಯ ಬೆಸೆದುಕೊಂಡಿದ್ದ ಬಸವನ ಕಾಲಿಗೆ ಇತ್ತೀಚೆಗೆ ಪೆಟ್ಟು ಬಿದ್ದಿತ್ತು. ಗಾಯಗೊಂಡಿದ್ದ ಬಸವ ಮಲಗಿದ ಜಾಗ ಬಿಟ್ಟು ಏಳಲೇ ಇಲ್ಲ. ಚಿಕಿತ್ಸೆ ಫಲಕಾರಿಯಾಗದೆ ಬಸವ ಸಾವನ್ನಪ್ಪಿದೆ.