ದಿ ದೆಹಲಿ ಪೈಲ್ಸ್ | 1984 ರ ನೈಜ ಘಟನೆ ಆಧಾರಿತ ಚಿತ್ರ
ಕಾಶ್ಮೀರ್ ಫೈಲ್ಸ್ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಅವರು “ ದಿ ದೆಹಲಿ ಫೈಲ್ಸ್” ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದರೆ ಈ ಚಿತ್ರದ ಕಥೆಯ ಸುಳಿವನ್ನು ವಿವೇಕ ಅಗ್ನಿಹೋತ್ರಿ ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರದ ಕಥೆ ಕುರಿತು ನಿರ್ದೇಶಕ ವಿವೇಕ ಅಗ್ನಿಹೋತ್ರಿ ರಿವಿಲ್ ಮಾಡಿದ್ದಾರೆ. ಈ ಚಿತ್ರವೂ ಕೂಡಾ ನೈಜ ಘಟನೆಯಾಧಾರಿತವಾಗಲಿದೆ.
ಈ ಬಾರಿ ಆಯ್ಕೆ ಮಾಡಿಕೊಂಡ ವಿಷಯವು 1984ರಲ್ಲಿ ನಡೆದ ನೈಜ ಘಟನೆಯನ್ನೇ ಆಧರಿಸಿದೆಯಂತೆ. ಆ ಸಮಯದ ಸತ್ಯವೇ ಬೇರೆಯಿದೆ. ಅದನ್ನು ಈ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ದೆಹಲಿಯಷ್ಟೇ ಅಲ್ಲ, ತಮಿಳು ನಾಡಿಗೆ ಸಂಬಂಧಿಸಿದ ಒಂದಷ್ಟು ಸತ್ಯಗಳನ್ನೂ ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ.
ನಾವು ಸತ್ಯವನ್ನು ಮಾತನಾಡಿದಾಗ ಎಲ್ಲರೂ ಅದನ್ನು ಒಪ್ಪಿಕೊಳ್ಳುತ್ತಾರೆ. ಸರಕಾರಗಳು ಕೂಡ ತಲೆಬಾಗುತ್ತವೆ. ಈಗ ಮತ್ತೊಂದು ಸತ್ಯ ದರ್ಶನಕ್ಕಾಗಿ ಸಿನಿಮಾ ಮಾಡುತ್ತಿರುವೆ. ಇಷ್ಟು ವರ್ಷಗಳಿಂದ ದೆಹಲಿ ಭಾರತವನ್ನು ಹೇಗೆ ನಾಶ ಮಾಡುತ್ತಿದೆ ಎನ್ನುವ ಕುತೂಹಲದ ಅಂಶಗಳು ಕೂಡ ಇವೆ ಎಂದು ಮಾಧ್ಯಮಗಳ ಜತೆ ಮಾತನಾಡಿದ್ದಾರೆ ವಿವೇಕ್ ಅಗ್ನಿಹೋತ್ರಿ.
ದೆಹಲಿಯನ್ನು ಯಾರೆಲ್ಲ ಆಳಿದರು, ಏನೆಲ್ಲ ಮಾಡಿದರು. ದೆಹಲಿ ಚರಿತ್ರೆಯಲ್ಲಿ ಉಳಿದುಕೊಂಡಿರುವ ಕಪ್ಪು ಚುಕ್ಕೆಯನ್ನೇ ಈ ಬಾರಿ ಬೆಳ್ಳಿ ಪರದೆಯ ಮೇಲೆ ತೋರಿಸುವ ಪ್ರಯತ್ನ ನಡೆಯಲಿದೆಯಂತೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು ಅತೀ ಶೀಘ್ರದಲ್ಲೇ ತಾರಾಗಣವನ್ನೂ ಆಯ್ಕೆ ಮಾಡಿಕೊಳ್ಳಲಿದ್ದಾರಂತೆ ನಿರ್ದೇಶಕರು.
ಸತ್ಯ ಘಟನೆಗಳನ್ನು ಆಧರಿಸಿದ ಸಿನಿಮಾಗಳನ್ನೇ ಮಾಡುತ್ತಿರುವ ವಿವೇಕ್ ಅಗ್ನಿಹೋತ್ರಿಗೆ ಜೀವ ಬೆದರಿಕೆಯಿದೆ ಅಂತೆ. ಹಾಗಾಗಿ ಹೆಚ್ಚಿನ ಭದ್ರತೆಯನ್ನು ಅವರಿಗೆ ನೀಡಲಾಗಿದೆ. ಅವರ ಚಲನವಲನಗಳ ಮೇಲೆ ಖಾಕಿ ಪಡೆ ಕಣ್ಣಿಟ್ಟು ಕಾಪಾಡುತ್ತಿದೆ.