ಮೈಸೂರು : ನಾನು ಬಾಂಬೆ ಡೇಸ್ ಪುಸ್ತಕವನ್ನು ಬರೆಯುತ್ತಿದ್ದೇನೆ. ಕರ್ನಾಟಕ ರಾಜ್ಯ ರಾಜಕಾರಣದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಸರ್ಕಾರವನ್ನು ಕೆಡವಿದ್ದು, ಇತಿಹಾಸದಲ್ಲಿ ಅದು ಐತಿಹಾಸಿಕ ಘಟನೆಯಾಗಿದೆ ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಬಾಂಬೆ ಡೇಸ್ ಪುಸ್ತಕದ ಬಗ್ಗೆ ಮಾತನಾಡಿದ ವಿಶ್ವನಾಥ್, ನಮ್ಮನ್ನು ದುಡ್ಡಿಗೆ ಮಾರಿಕೊಂಡವರು ಎಂದೆಲ್ಲ ಪ್ರಚಾರ ಮಾಡಲಾಯಿತು. ಆದರೆ, ಯಾವ ಕಾರಣಕ್ಕಾಗಿ 17 ಜನ ಶಾಸಕರು ಜೆಡಿಎಸ್ ಮತ್ತು ಕಾಂಗ್ರೆಸ್ನಿಂದ ಹೊರಬಂದರು ಎಂಬ ಬಗ್ಗೆ ವಿಶ್ಲೇಷಿಸಲು ಎಲ್ಲೂ ಆಗಿಲ್ಲ. ಎಲ್ಲರ ಮೇಲೂ ಕಳಂಕ, ದೋಷ, ಆಪಾದನೆಗಳು ಬಂದಿವೆ. ಸತ್ಯ ಹೊರ ಬರಲಿಲ್ಲ. ಸತ್ಯವನ್ನು ಹೊರಕ್ಕೆ ಹಾಕುವುದಕ್ಕೆ ನಾನು ಬಾಂಬೆ ಡೇಸ್ ಬರೆಯುತ್ತಿದ್ದೇನೆ ಎಂದರು.
ಇದೇ ವೇಳೆ ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದನ್ನು ನಾನು ಅಭಿನಂದಿಸುತ್ತೇನೆ. ಇವರು ಕೆಳ ಹಂತದಿಂದ ನಾಯಕರಾಗಿ ಬೆಳೆದವರು. ಅವರು ಮುಖ್ಯಮಂತ್ರಿಯಾಗುವ ಸಾಲಿನಲ್ಲಿ ಇದ್ದಾರೆ ಎಂದರು.








