ಕೊರೊನಾ ವಾರಿಯರ್ಸ್ ನ್ನು ಕೆಲಸದಿಂದ ಕೈ ಬಿಡುವುದಾಗಿ ನಿರ್ಧರಿಸಿದ ಆರೋಗ್ಯ ಇಲಾಖೆ
ದಾವಣಗೆರೆ: ಕೊರೊನಾ ಸಮಯದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ವಾರಿಯರ್ಸ್ ಆಗಿ ದುಡಿದ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ಕೈ ಬಿಡುವುದಾಗಿ ಜಿಲ್ಲಾ ಆರೋಗ್ಯ ಇಲಾಖೆ ನಿರ್ಧರಿಸಿದೆ.
ಕೊರೊನಾ ಸಮಯದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಸಾವಿರಾರು ರೋಗಿಗಳಿಗೆ ದೈರ್ಯ ಹೇಳಿ ಗುಣಪಡಿಸಿದ 180 ವಾರಿಯರ್ಸ್ ರನ್ನು ಕೆಲಸದಿಂದ ಕೈ ಬಿಡುವುದಾಗಿ ದಾವಣಗೆರೆ ಜಿಲ್ಲಾ ಆರೋಗ್ಯ ಇಲಾಖೆ ನಿರ್ಧರಿಸಿದೆ. ಇದರಿಂದಾಗಿ 180 ಸಿಬ್ಬಂದಿಗಳ ಬದುಕು ಅತಂತ್ರವಾಗಿದೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಟೊಂಕ ಕಟ್ಟಿ ನಿಂತಿದ್ದ ಕೆಲ ಕೊರೊನಾ ವಾರಿಯರ್ಸ್‌ಗಳನ್ನು ಜಿಲ್ಲಾ ಆರೋಗ್ಯ ಇಲಾಖೆ ಕೆಲಸದಿಂದ ಕೈ ಬಿಡುವ ನಿರ್ಧಾರ ಕೈಗೊಂಡಿದ್ದು, ದಾವಣಗೆರೆಯ ಜಿಲ್ಲಾ ಆರೋಗ್ಯ ಇಲಾಖೆ ಅಧೀನದಲ್ಲಿ ಕೊರೊನಾ ಸಂದರ್ಭದಲ್ಲಿ ಸೇವೆ ಸಲ್ಲಿಸಿದ್ದ ಆರೋಗ್ಯ ಸಿಬ್ಬಂದಿಗಳು ಈಗ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಕೊರೊನಾ ಸಮಯದಲ್ಲಿ ರಾಜ್ಯದ ಎಲ್ಲ ಕಡೆಗಳಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿ ಕೊರತೆ ಇದ್ದ ಕಾರಣ ಐದು ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಇಲಾಖೆ ನೇಮಕ ಮಾಡಿಕೊಂಡಿತ್ತು. ಅದರಲ್ಲಿ ಕೆಲವರನ್ನು ಮುಂದುವರೆಸುವುದಾಗಿ ಕೂಡ ಹೇಳಲಾಗಿತ್ತು. ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡಿದ್ದರಿಂದ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದ್ದ ನೌಕರರನ್ನು ಕೆಲಸದಿಂದ ತೆಗೆಯಲು ಚಿಂತಿಸಲಾಗಿದೆ.
ಈ ಹಿನ್ನೆಲೆ ಕೊರೊನಾ ಎರಡು ಹಾಗೂ ಮೂರನೇ ಅಲೆಯ ತುರ್ತು ಸಂದರ್ಭದಲ್ಲಿ ಆಯ್ಕೆಯಾಗಿ ಸಾರ್ವಜನಿಕರ ಸೇವೆ ಮಾಡುತ್ತಿರುವ ಎಲ್ಲ ಕೊರೊನಾ ವಾರಿಯರ್ಗಳನ್ನು ಸೇವೆಯಲ್ಲಿ ಮುಂದುವರಿಸುವಂತೆ ಕೊರೊನಾ ವಾರಿಯರ್ಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕೆಲಸದಿಂದ ಕೈ ಬಿಟ್ಟರೆ ನಮ್ಮ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಲ್ಲದೇ ಬಾಕಿ ವೇತನ ಹಾಗೂ ಪ್ರೋತ್ಸಾಹ ಧನವನ್ನು ಸಹ ಈ ಕೂಡಲೇ ಬಿಡುಗಡೆ ಮಾಡಬೇಕು. ಈಗಾಗಲೇ ಬಹುತೇಕ ಕಡೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಅಲ್ಲಿ ನಮ್ಮನ್ನು ನೇಮಿಸಿ ಮುಂದುವರಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.








