ನವದೆಹಲಿ : ಎಐಸಿಸಿ ಅಧ್ಯಕ್ಷರ ನೇಮಕ ವಿಚಾರವಾಗಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ನಾಯಕರ ಆಂತರಿಕ ಜಗಳ ಭುಗಿಲೆದ್ದಿದೆ. ನಾಯಕತ್ವದ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ 23 ನಾಯಕರು ಬಿಜೆಪಿ ಪರ ಇದ್ದಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡುತ್ತ, ಸೋನಿಯಾ ಗಾಂಧಿ ಪತ್ರ ಬರೆದ ನಾಯಕರ ವಿರುದ್ಧ ಕಿಡಿಕಾರಿದರು. ಕೋವಿಡ್ 19, ಮಧ್ಯಪ್ರದೇಶ, ರಾಜಸ್ಥಾನ ಬಿಕ್ಕಟ್ಟಿನ ಸಮಯದಲ್ಲಿ ಹಿರಿಯ ನಾಯಕರಾದವರು ಈ ರೀತಿ ಪತ್ರ ಬರೆಯುವುದು ಸರಿಯಲ್ಲ, ಪತ್ರ ಬರೆಯಲು ಇದು ಸೂಕ್ತ ಸಮಯವೂ ಅಲ್ಲ ಎಂದು ರಾಹುಲ್ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಪತ್ರ ಬರೆದವರು ಬಿಜೆಪಿ ಪರವಾಗಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಕೆಂಡಾಮಂಡಲರಾದ ಕಾಂಗ್ರೆಸ್ ನ ಹಿರಿಯ ನಾಯಕ ಕಪಿಲ್ ಸಿಬಲ್, ರಾಹುಲ್ ಗಾಂಧಿ “ನಾವು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದೇವೆ” ಎಂದು ಹೇಳುತ್ತಾರೆ. ರಾಜಸ್ಥಾನ ಬಿಕ್ಕಟ್ಟು ವಿಚಾರವಾಗಿ ಹೈಕೋರ್ಟ್ ನಲ್ಲಿ ಪಕ್ಷವನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡಿದ್ದೇವೆ. ಮಣಿಪುರದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದೇವೆ. ಕಳೆದ 30 ವರ್ಷಗಳಲ್ಲಿ ಯಾವುದೇ ವಿಷಯದ ಬಗ್ಗೆ ಬಿಜೆಪಿ ಪರವಾಗಿ ಹೇಳಿಕೆ ನೀಡಿಲ್ಲ. 30 ವರ್ಷ ಪಕ್ಷದ ಪರವಾಗಿ ನಾನು ಕೆಲಸ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಗುಲಾಬ್ ನವಿ ಆಜಾದ್ ಪ್ರತಿಕ್ರಿಯಿಸಿ, ಪತ್ರಗಳಲ್ಲಿ ಸಹಿ ಮಾಡಿದವರು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಭಾವನೆ ಇದ್ದರೆ ರಾಜೀನಾಮೆ ನೀಡುವುದಾಗಿ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
ಒಟ್ಟಾರೆ ರಾಹುಲ್ ಗಾಂಧಿ ಅವರ ಹೇಳಿಕೆ ಸಭೆಯಲ್ಲಿ ಭಾರಿ ಸದ್ದು ಮಾಡುತ್ತಿದ್ದು, ರಾಗಾ ವಿರುದ್ಧ ಕಪಿಲ್ ಸಿಬಲ್, ಗುಲಾಬ್ ನಬಿ ಆಜಾದ್ ಆಕ್ರೋಶ ಹೊರಹಾಕುತ್ತಿದ್ದಾರೆ.









