ಸಪ್ತ ಸ್ವರಗಳಲ್ಲಿ ಲೀನವಾದ ಭಾರತದ ಖ್ಯಾತ ಗಾಯಕ, ಗಾನಗಂಧರ್ವನ ಯುಗಾಂತ್ಯ:
ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಪಂಚಭಾಷಾ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಇಂದು ಭೌತಿಕ ಲೋಕವನ್ನು ತ್ಯಜಿಸಿದ್ದಾರೆ. ಎಸ್‌ಪಿಬಿ ಅವರು ಕೋವಿಡ್ ಸೋಂಕಿನಿಂದ ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 13ರ ರಾತ್ರಿ ಅವರ ಆರೋಗ್ಯ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ಶಿಫ್ಟ್ ಮಾಡಿ ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ನೀಡಲಾಗಿತ್ತು. ನಂತರ ಅಗಸ್ಟ್ 28ರಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಜೊತೆಗೆ ಕೊರೋನಾ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ಕೂಡ ಆಗಿತ್ತು. ಇನ್ನೇನು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎನ್ನುವಷ್ಟರಲ್ಲಿ ಅವರ ಆರೋಗ್ಯ ಪುನಃ ಗಂಭೀರ ಸ್ಥಿತಿಗೆ ತಲುಪಿತ್ತು.
ಅವರ ಆರೋಗ್ಯ ಸುಧಾರಣೆಗಾಗಿ ಸೆಲೆಬ್ರಿಟಿಗಳು, ಅಭಿಮಾನಿಗಳು ದೇಶದಾದ್ಯಂತ ಪ್ರಾರ್ಥನೆ ಮಾಡಿದ್ದರು. ಆದರೆ ಗಾನಕೋಗಿಲೆ ತಮ್ಮ 74ರ ಹರೆಯದಲ್ಲಿ ಈ ಭೌತಿಕ ಲೋಕವನ್ನು ತ್ಯಜಿಸಿ ಹೋಗಿದ್ದಾರೆ. ಹುಟ್ಟು ಅಕಸ್ಮಿಕ ಸಾವು ನಿಶ್ಚಯ ಎಂಬ ವಿಧಿತತ್ವ ನಮಗೆ ಗೊತ್ತಿದ್ದರೂ ಹಲವು ಸಾವುಗಳು ನಮಗೆ ಆಘಾತ ಉಂಟುಮಾಡುತ್ತದೆ. ಎಸ್.ಪಿ.ಬಿ ಯವರ ಆಗಲುವಿಕೆ ಕೂಡ ಅವರ ಆರಾಧಕರನ್ನು ಶೂನ್ಯ ಭಾವಕ್ಕೆ ತಳ್ಳಿದೆ ಎಂದರೆ ತಪ್ಪಾಗಲಾರದು.
ಎಸ್ಪಿ ಬಾಲಸುಬ್ರಹ್ಮಣ್ಯಂ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. 16 ಭಾರತೀಯ ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಈ ಮಹಾನ್ ಗಾಯಕ ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಎಸ್.ಪಿ.ಬಿ ಅವರಿಗೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳು ಬಂದಿವೆ.