ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಪರ್ವ ತೀವ್ರ ಸಂಚಲನ ಮೂಡಿಸಿದ್ದು, ಇದೀಗ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಮುಖ್ಯಮಂತ್ರಿಯ ನಿರ್ಗಮನದ ಬಗ್ಗೆ ಅತ್ಯಂತ ಲೇವಡಿ ಮತ್ತು ತೀಕ್ಷ್ಣ ಮಾತುಗಳಿಂದ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ದಿವಾಳಿಯಾಗಿದೆ, ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎನ್ನುವುದು ಖಚಿತವಾದ ಹಿನ್ನೆಲೆಯಲ್ಲೇ ಸಿದ್ದರಾಮಯ್ಯ ಅವರು ಸದ್ದಿಲ್ಲದೆ ಕುರ್ಚಿಯಿಂದ ಕೆಳಗಿಳಿದಿದ್ದಾರೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ ಅಶೋಕ್, ಸಿದ್ದರಾಮಯ್ಯ ಅವರು ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ವ್ಯಕ್ತಿಯಲ್ಲ. ಅವರು ಹಠವಾದಿ ಮತ್ತು ರಾಜಕೀಯವಾಗಿ ವೈಲೆಂಟ್ ಆಗಿರುವವರು. ಅಂತಹ ಸಿದ್ದರಾಮಯ್ಯ ಇಂದು ಸೈಲೆಂಟ್ ಆಗಿ ರಾಜೀನಾಮೆ ನೀಡಿದ್ದಾರೆ ಎಂದರೆ ಅದರ ಹಿಂದೆ ದೊಡ್ಡ ಕಾರಣವಿದೆ. ರಾಜ್ಯದ ಇಂಜಿನ್ ಸೀಜ್ ಆಗಿದೆ, ಸರ್ಕಾರ ನಡೆಸಲು ಬೊಕ್ಕಸದಲ್ಲಿ ಹಣವಿಲ್ಲ ಎಂಬ ಕಹಿ ಸತ್ಯ ಅವರಿಗೆ ಗೊತ್ತಾಗಿದೆ. ಹೀಗಾಗಿ ಗೌರವ ಉಳಿಸಿಕೊಳ್ಳಲು ಅವರು ಈ ಹಾದಿ ತುಳಿದಿದ್ದಾರೆ ಎಂದು ವಿಶ್ಲೇಷಿಸಿದರು.
ಮುಂದುವರಿದು ಡಿ ಕೆ ಶಿವಕುಮಾರ್ ಅವರಿಗೆ ನೇರ ಸವಾಲು ಹಾಕಿದ ಅಶೋಕ್, ಸಿದ್ದರಾಮಯ್ಯ ಅವರು ಮಾಡಿರುವ ಸಾವಿರಾರು ಕೋಟಿ ರೂಪಾಯಿ ಸಾಲದ ಹೊರೆಯನ್ನು ನೀವು ಹೇಗೆ ನಿಭಾಯಿಸುತ್ತೀರಿ? ಈಗ ಅಭಿವೃದ್ಧಿ ಮಾಡಲು ಹಣ ಎಲ್ಲಿದೆ? ಎಂದು ಪ್ರಶ್ನಿಸಿದರು. ಗ್ಯಾರಂಟಿ ಯೋಜನೆಗಳ ವೈಫಲ್ಯದ ಬಗ್ಗೆ ಕಿಡಿಕಾರಿದ ಅವರು, ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ 5 ಸಾವಿರ ಕೋಟಿ ರೂಪಾಯಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾಗೆಯೇ ಅನ್ನಭಾಗ್ಯ ಯೋಜನೆಯಡಿ ಜನರಿಗೆ ನೀಡಬೇಕಾದ 700 ಕೋಟಿ ರೂಪಾಯಿಗಳನ್ನು ಕೊಡಲೇಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡದಿದ್ದರೆ ಬಿಜೆಪಿ ಸುಮ್ಮನೆ ಕೂರುವುದಿಲ್ಲ. ಜನರ ಪರವಾಗಿ ನಾನು ಬೀದಿಗಿಳಿದು ಹೋರಾಟ ಮಾಡುತ್ತೇನೆ. ಯಾವುದೇ ಮಟ್ಟದ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ. ಇದನ್ನು ನಾವು ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ಆರ್ ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟದ ಮುನ್ಸೂಚನೆಯನ್ನು ಅವರು ನೀಡಿದ್ದಾರೆ.







