ರಾಜ್ಯ ರಾಜಕೀಯದಲ್ಲಿ ಸದ್ಯದ ವಿದ್ಯಮಾನಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೇಹಭಾಷೆಯಲ್ಲಿನ ಬದಲಾವಣೆಗಳು ಅಚ್ಚರಿ ಮೂಡಿಸುತ್ತಿವೆ. ಇದಕ್ಕೆ ಪೂರಕವೆಂಬಂತೆ ಪ್ರಸಿದ್ಧ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಭವಿಷ್ಯವಾಣಿ ಈಗ ಮುನ್ನೆಲೆಗೆ ಬಂದಿದೆ. ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಶ್ರೀಗಳು ನುಡಿದಿದ್ದ ಕಾಲಜ್ಞಾನ ಮತ್ತು ಪ್ರಸ್ತುತ ಮುಖ್ಯಮಂತ್ರಿಗಳ ಹೇಳಿಕೆಗಳ ನಡುವೆ ತಾಳೆ ಹಾಕಲಾಗುತ್ತಿದ್ದು, ಸಂಕ್ರಾಂತಿಯ ವೇಳೆ ರಾಜ್ಯದಲ್ಲಿ ಮಹತ್ತರ ರಾಜಕೀಯ ಬದಲಾವಣೆಯಾಗಲಿದೆಯೇ ಎಂಬ ಚರ್ಚೆ ಜೋರಾಗಿದೆ.
ಎರಡು ದಿನಗಳ ಹಿಂದಷ್ಟೇ ಕೆ.ಆರ್. ಪೇಟೆಯಲ್ಲಿ ಮಾತನಾಡಿದ್ದ ಕೋಡಿಮಠದ ಶ್ರೀಗಳು, ರಾಜ್ಯ ರಾಜಕೀಯದ ಭವಿಷ್ಯದ ಬಗ್ಗೆ ಮಾರ್ಮಿಕವಾಗಿ ನುಡಿದಿದ್ದರು. ಮುಂಬರುವ ಮಕರ ಸಂಕ್ರಾಂತಿಯ ವೇಳೆಗೆ ರಾಜ್ಯದಲ್ಲಿ ಮಹತ್ವದ ಬದಲಾವಣೆಗಳು ನಿಶ್ಚಿತ ಎಂಬ ಮುನ್ಸೂಚನೆ ನೀಡಿದ್ದರು. ಕಾಕತಾಳೀಯವೆಂಬಂತೆ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕೂಡ ಮಂಗಳೂರಿನಲ್ಲಿ ಇದೇ ರೀತಿಯ ಹೇಳಿಕೆ ನೀಡಿದ್ದು, ಕ್ರಾಂತಿ ಏನಿದ್ದರೂ ಸಂಕ್ರಾಂತಿಯ ನಂತರ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದರು. ಈ ಇಬ್ಬರ ಹೇಳಿಕೆಗಳು ಒಂದೇ ದಿಕ್ಕಿನಲ್ಲಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ಧಾಟಿಯಲ್ಲಿ ದಿಢೀರ್ ಬದಲಾವಣೆ
ಕಳೆದ ದಸರಾ ಹಬ್ಬದ ಸಂದರ್ಭದಲ್ಲಿ ಮತ್ತು ಅದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೂರ್ಣಾವಧಿಗೆ ನಾನೇ ಮುಖ್ಯಮಂತ್ರಿ, ನಾನೇ ಬಜೆಟ್ ಮಂಡಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದರು. ಅವರ ಆಪ್ತ ಸಚಿವರು ಮತ್ತು ಶಾಸಕರು ಕೂಡ 2028ರ ಮೇ ವರೆಗೆ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ ಎಂದು ಬಂಡೆಗಳಂತೆ ಸಿಎಂ ಬೆನ್ನಿಗೆ ನಿಂತಿದ್ದರು.
ಆದರೆ, ಈಗ ದೃಶ್ಯ ಬದಲಾಗಿದೆ. ಕೋಡಿಶ್ರೀಗಳು ನುಡಿದಂತೆ, ಸಿದ್ದರಾಮಯ್ಯನವರನ್ನು ಬಲವಂತವಾಗಿ ಕೆಳಗಿಳಿಸಲು ಸಾಧ್ಯವಿಲ್ಲ, ಅವರು ಮನಸ್ಸು ಮಾಡಿದರೆ ಮಾತ್ರ ಪದತ್ಯಾಗ ಸಾಧ್ಯ ಎಂಬ ಮಾತು ಈಗಿನ ವಿದ್ಯಮಾನಗಳಿಗೆ ಕನ್ನಡಿ ಹಿಡಿದಂತಿದೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರು ನೀಡಿದ ಹೇಳಿಕೆ ಈ ಬದಲಾವಣೆಗೆ ಸಾಕ್ಷಿಯಾಗಿದೆ. ನಾನು ಮತ್ತು ಡಿಸಿಎಂ ಸಹೋದರರಿದ್ದಂತೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವಿಬ್ಬರೂ ಬದ್ಧ. ಹೈಕಮಾಂಡ್ ಸೂಚಿಸಿದ ದಿನ ಡಿ.ಕೆ. ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳುವ ಮೂಲಕ, ತಮ್ಮ ಹಿಂದಿನ ಬಿಗಿಲುವನ್ನು ಸಡಿಲಿಸಿದಂತೆ ಕಾಣುತ್ತಿದೆ.
ಕೋಡಿಶ್ರೀಗಳು ತಮ್ಮ ಭವಿಷ್ಯವಾಣಿಯಲ್ಲಿ ಬಳಸಿದ ಉಪಮೆಗಳು ಈಗಿನ ರಾಜಕೀಯ ಸನ್ನಿವೇಶಕ್ಕೆ ಅನ್ವಯವಾಗುತ್ತಿವೆ. ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ ಎಂದು ಹೇಳುವ ಮೂಲಕ, ಸದ್ಯದ ಮಟ್ಟಿಗೆ ಸಿದ್ದರಾಮಯ್ಯನವರ ಸ್ಥಾನ ಭದ್ರವಾಗಿದ್ದರೂ, ಭವಿಷ್ಯದ ಬದಲಾವಣೆಯನ್ನು ತಳ್ಳಿಹಾಕುವಂತಿಲ್ಲ ಎಂಬ ಅರ್ಥವನ್ನು ಶ್ರೀಗಳು ಕಲ್ಪಿಸಿದ್ದರು. ಹಕ್ಕಬುಕ್ಕರು ಹಾಗೂ ಸಂಗೊಳ್ಳಿ ರಾಯಣ್ಣನಂತಹ ಮಹನೀಯರ ಉದಾಹರಣೆ ನೀಡಿ ಸಮುದಾಯದ ಶಕ್ತಿಯನ್ನು ಉಲ್ಲೇಖಿಸಿದ್ದರು.
ಮತ್ತೊಂದೆಡೆ, ಶಿವನ ಪಾದಕ್ಕೆ ಬೀಳಲಿದೆ ಮಲ್ಲಿಗೆ ಎಂಬ ಒಗಟಿನ ಮಾತು ಸಂಕ್ರಾಂತಿಯ ಆಸುಪಾಸಿನಲ್ಲಿ ನಡೆಯಬಹುದಾದ ಅಧಿಕಾರ ಹಸ್ತಾಂತರ ಅಥವಾ ಶರಣಾಗತಿಯ ಸಂಕೇತವೇ ಎಂದು ವಿಶ್ಲೇಷಿಸಲಾಗುತ್ತಿದೆ.
ಒಟ್ಟಿನಲ್ಲಿ, ಕೋಡಿಮಠದ ಶ್ರೀಗಳ ಅಂದಿನ ಭವಿಷ್ಯ ಮತ್ತು ಇಂದಿನ ರಾಜಕೀಯ ಬೆಳವಣಿಗೆಗಳು ಒಂದಕ್ಕೊಂದು ಪೂರಕವಾಗಿ ಸಾಗುತ್ತಿವೆ. ಸಂಕ್ರಾಂತಿ ಹಬ್ಬವು ಕೇವಲ ಸುಗ್ಗಿ ಹಬ್ಬವಾಗಿರದೆ, ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯದ ಆರಂಭವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರ ಜನವರಿ ತಿಂಗಳಲ್ಲಿ ಸಿಗಲಿದೆ. ಅಲ್ಲಿಯವರೆಗೆ ಸಿಎಂ ಸಿದ್ದರಾಮಯ್ಯನವರ ಹೈಕಮಾಂಡ್ ಬದ್ಧತೆಯ ಹೇಳಿಕೆ ಮತ್ತು ಕೋಡಿಶ್ರೀಗಳ ಭವಿಷ್ಯವಾಣಿ ರಾಜಕೀಯ ಪಡಸಾಲೆಯಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿ ಉಳಿಯಲಿದೆ.








