ಬೆಂಗಳೂರು: ಕೊರೊನಾ ವೈರಸ್ ರಾಜ್ಯಾದ್ಯಂತ ತಲ್ಲಣ ಸೃಷ್ಠಿಸಿದ್ದು, ಇಂದು ಮತ್ತೆ ರಾಜ್ಯದಲ್ಲಿ 6 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಈ ಮೂಲಕ ಮಾರಕ ಸೋಂಕು ತಗುಲಿದವರ ಸಂಖ್ಯೆ 181ಕ್ಕೆ ಏರಿಕೆಯಾಗಿದ್ದು, ಮತ್ತಷ್ಟು ಭೀತಿ ತಂದೊಡ್ಡಿದೆ. ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ.
ಕಲಬುರಗಿ ಮೂಲದ 65 ವರ್ಷದ ವೃದ್ಧರೊಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮೃತರ ಸಂಖ್ಯೆ ಐದಕ್ಕೇರಿದೆ.
ತೀವ್ರ ಉಸಿರಾಟದ ತೊಂದರೆಯಿಂದಾಗಿ 65 ವರ್ಷದ ವೃದ್ಧ ಆಸ್ಪತ್ರೆಯಲ್ಲಿ ನಿನ್ನೆ ನಿಧನ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಮೃತ ವ್ಯಕ್ತಿ ನಗರದ ಸಂತ್ರಸವಾಡಿ ನಿವಾಸಿಯಾಗಿದ್ದು, ಹಣ್ಣು ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು ಎನ್ನಲಾಗಿದೆ.








