ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ಸೋಂಕಿಗೆ ಇಂದು ಇನ್ನೊಂದು ಬಲಿಯಾಗಿದೆ. ವೃದ್ಧೆಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಸರಕಾರಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ನಗರದ ಫಸ್ಟ್ ನ್ಯೂರೋ ಸಂಪರ್ಕದಿಂದ ಶಕ್ತಿನಗರ ಮೂಲದ 80 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಐದಕ್ಕೇರಿದೆ.
ರೋಗಿ ಸಂಖ್ಯೆ 507 ಆಗಿರುವ ಈ ವೃದ್ಧೆ ಕೆಮ್ಮು, ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ವೆನ್‍ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಪರೀಕ್ಷಿಸಿದಾಗ ಉಸಿರಾಟ ಸಮಸ್ಯೆ ಗಂಭೀರ ಆಗಿರುವುದು ಕಂಡು ಬಂದಿತ್ತು. ದಾಖಲಾದ ಸಂದರ್ಭ ಅವರ ಗಂಟಲಿನ ಸ್ರಾವದ ಮಾದರಿ ಪರೀಕ್ಷೆ ನಡೆಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.
ಗಂಭೀರ ಸ್ಥಿತಿಯಲ್ಲಿದ ಅವರನ್ನು ವೆನ್‍ಲಾಕ್ ಆಸ್ಪತ್ರೆಯ ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಮುಂಜಾನೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.