ಮಂಗಳೂರು, ಜೂನ್ 4: ಈ ವರ್ಷದ ಎರಡನೇ ಚಂದ್ರಗ್ರಹಣ ಜೂನ್ 5 ರಂದು ಸಂಭವಿಸಲಿದೆ. ಈ ಬಾರಿ ಸಂಭವಿಸುವ ಚಂದ್ರ ಗ್ರಹಣವು ಸಾಮಾನ್ಯವಾಗಿ ಸಂಭವಿಸುವ ಚಂದ್ರ ಗ್ರಹಣಕ್ಕಿಂತ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಜೂನ್ 5 ರಂದು ಹುಣ್ಣಿಮೆಯಾಗಿದ್ದು, ಆ ದಿನ ರಾತ್ರಿ 11-15 ಕ್ಕೆ ಗ್ರಹಣ ಆರಂಭವಾಗಿ ಜೂನ್ 6 ರ ಬೆಳಗಿನ ಜಾವ 2-34 ಕ್ಕೆ ಕೊನೆಗೊಳ್ಳಲಿದೆ. ಜೂನ್ 6 ರ ಬೆಳಗಿನ ಜಾವ 12.54 ಕ್ಕೆ ಗ್ರಹಣವು ಸ್ಪಷ್ಟವಾಗಿ ಗೋಚರಿಸಲಿದೆ.
ಈ ಬಾರಿ ಸಂಭವಿಸುವ ಗ್ರಹಣದ ವಿಶೇಷತೆಯೆಂದರೆ ಗ್ರಹಣ ನಡೆಯುವಾಗ ಚಂದ್ರನಲ್ಲಿ ಯಾವ ಬದಲಾವಣೆಯೂ ಸಂಭವಿಸುವುದಿಲ್ಲ ಮತ್ತು ಅರ್ಧಾಕಾರದಲ್ಲೂ ಗೋಚರಿಸುವುದಿಲ್ಲ. ದಕ್ಷಿಣ ಅಮೆರಿಕಾ, ಯುರೋಪ್, ಆಫ್ರಿಕಾ, ಏಷ್ಯಾದ ಕೆಲವು ಭಾಗಗಳಲ್ಲಿ ಹಾಗೂ ಆಸ್ಟ್ರೇಲಿಯಾದಲ್ಲಿ ಈ ಬಾರಿಯ ಚಂದ್ರಗ್ರಹಣವು ಗೋಚರಿಸಲಿದೆ ಎಂದು ಹೇಳಲಾಗಿದೆ. ಜೂನ್ ತಿಂಗಳಲ್ಲಿ ಎರಡು ಬಾರಿ ಗ್ರಹಣ ಸಂಭವಿಸಲಿದ್ದು, ಜೂನ್ 5 ರಂದು ಚಂದ್ರಗ್ರಹಣ ಸಂಭವಿಸಿದರೆ, ಜೂನ್ 21 ರಂದು ಸೂರ್ಯಗ್ರಹಣ ಸಂಭವಿಸುತ್ತದೆ.








