ಮಂಗಳೂರಿನಲ್ಲಿ ಸುರಿದ ಮೊದಲ ಮಳೆಗೆ ಪಂಪ್ವೆಲ್ ಮೇಲ್ಸೇತುವೆಯ ಒಂದು ಬದಿ ಬಿರುಕು ಬಿಟ್ಟಿದೆ. ಮೊದಲ ಮಳೆಗೆ ಮಂಗಳೂರಿನ ಪಂಪ್ವೆಲ್ ಸೇತುವೆಯ ಒಂದು ಪಾಶ್ವದಲ್ಲಿ ಬಿರುಕು ಬಿಟ್ಟಿರುವುದು ಆತಂಕ ಸೃಷ್ಟಿಸಿದ್ದು, ಇದು ಅಪಾಯದ ಕರೆಗಂಟೆ ಬಾರಿಸಿದಂತಾಗಿದೆ.
ಲಾಕ್ ಡೌನ್ ಆದೇಶ ಜಾರಿಯಲ್ಲಿ ಇರುವುದರಿಂದ ವಾಹನಗಳ ಓಡಾಟ ಬೆರಳೆಣಿಕೆಯಷ್ಟು ಇದ್ದು, ವಾಹನಗಳ ಸಂಚಾರ ಹೆಚ್ಚಾದರೆ ಅಪಾಯದ ಅವಕಾಶಗಳು ಹೆಚ್ಚು.
2010ರಲ್ಲಿ ಆರಂಭವಾಗಿದ್ದ ಈ ಸೇತುವೆಯ ಕಾಮಗಾರಿ ಬರೊಬ್ಬರಿ ಹತ್ತು ವರ್ಷಗಳ ನಂತರ ಅಂದರೆ 2020ರ ಜನವರಿಯಲ್ಲಿ ಹಲವು ಟೀಕೆ-ಟ್ರೋಲ್ ಗಳ ನಡುವೆ ಸಂಚಾರಕ್ಕೆ ಮುಕ್ತವಾಗಿತ್ತು.
ಆದರೆ, ಇದೀಗ ಮೊದಲ ಮಳೆಗೆ ಪಂಪ್ವೆಲ್ ಮೇಲ್ಸೇತುವೆಯ ಒಂದು ಬದಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಪಾಯದ ಮುನ್ಸೂಚನೆ ಎದ್ದು ಕಾಣುತ್ತಿದೆ. ಇಷ್ಟೇ ಅಲ್ಲ ಶನಿವಾರ ಸುರಿದ ಮಳೆಯಿಂದಾಗಿ ಪಂಪ್ ವೆಲ್ ಮೇಲ್ಸೇತುವೆ ಪಕ್ಕದಲ್ಲಿರುವ ಸರ್ವೀಸ್ ರಸ್ತೆ ಕೂಡ ಸಂಪೂರ್ಣ ಕೆಸರುಮಯವಾಗಿದೆ. ಹೆದ್ದಾರಿಯ ನೀರು ಹರಿದು ಹೋಗಲು ಮಾಡಿದ ಜಾಗದಿಂದ ರಭಸವಾಗಿ ಹರಿದ ನೀರು ಪಕ್ಕದಲ್ಲಿ ತುಂಬಿಸಿದ್ದ ಕೆಂಪು ಮಣ್ಣಿಗೆ ತುಂಬಿದ್ದು, ಕೆಸರು ಮಿಶ್ರಿತ ನೀರು ಕೆಳಭಾಗದ ರಸ್ತೆಗೆ ಹರಿದಿದೆ. ಇನ್ನೂ ಒಂದೆರಡು ದಿನಗಳ ಕಾಲ ಮಳೆ ಮುಂದುವರಿದರೆ, ಈ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗಬಹುದು. ನೀರು ನಿಂತಿರುವ ಜಾಗ ಚಾಲಕರ ಗಮನಕ್ಕೆ ಬಾರದೇ ಅಪಾಯವಾಗುವ ಸಾಧ್ಯತೆ ಇರುವುದರಿಂದ, ಈ ರಸ್ತೆಯಲ್ಲಿ ಅತ್ಯಂತ ವೇಗವಾಗಿ ಹೋಗುವುದು ಕೂಡಾ ಬಹಳ ಅಪಾಯಕಾರಿಯಾಗಿದೆ. ಮಳೆಗಾಲ ಆರಂಭವಾಗುವ ಮುನ್ನ ಸಂಬಂಧಪಟ್ಟ ಜನಪ್ರತಿನಿಧಿಗಳು ಗಮನಹರಿಸಿ, ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.








