ಚಾಮರಾಜನಗರ: ಶಾಲೆಯ ಮೈದಾನದಲ್ಲಿ ಕೋಳಿಯೊಂದು ಬಾಲಕಿಗೆ ಕುಕ್ಕಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಶಾಲೆಗೆ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದಿರುವ ಹಿನ್ನೆಲೆಯಲ್ಲಿ ಕೋಳಿ ಕುಕ್ಕಿದೆ ಎನ್ನಲಾಗಿದ್ದು, ಪೋಷಕರು ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹನೂರು ತಾಲೂಕಿನ ಪೆದ್ದನಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಾಲಕಿಯ ಪಾಲಕರು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಲೆಯಲ್ಲಿ ಒಂದನೇ ತರಗತಿ ಬಾಲಕಿಗೆ ಕೋಳಿ ಕಚ್ಚಿ ಗಾಯಗೊಳಿಸಿದ್ದು, ಶಾಲೆಗೆ ಬೀಗ ಜಡಿದು ಮಕ್ಕಳನ್ನು ಪಾಲಕರು ಮನೆಗೆ ಕರೆದೊಯ್ದಿದ್ದರು. ಶಾಲೆಯ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ವಿನಾಕಾರಣ ಹಸು-ಕರುಗಳನ್ನು ಕಟ್ಟುತ್ತಿದ್ದು, ಜೊತೆಗೆ ಕೋಳಿಗಳನ್ನು ಮೇಯಲು ಬಿಡುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಪಾಲಕರ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ.








