ತಿರುಮಲ ತಿರುಪತಿ ಬೆಟ್ಟಗಳು ಕೇವಲ ಯಾತ್ರಾ ಸ್ಥಳವಷ್ಟೇ ಅಲ್ಲ, ಅದು ಪವಾಡಗಳಿಗೆ ಸಾಕ್ಷಿಯಾಗಿರುವ ಪುಣ್ಯಭೂಮಿ. ಅದೆಷ್ಟೋ ವರ್ಷಗಳಿಂದ ಲಕ್ಷಾಂತರ ಭಕ್ತರ ಬೇಡಿಕೆಗಳನ್ನು ಪೂರೈಸಿ, ಪಾಪವನ್ನು ನಿವಾರಿಸಿ ದಿವ್ಯ ಅನುಭವ ನೀಡುವ ಸ್ಥಳ. ಹಾಗಾಗಿಯೇ ಭಕ್ತರಿಗೆ ಸಂಕಟ ಬಂದಾಗ ವೆಂಕಟರಮಣನ ನೆನಪಾಗುತ್ತದೆ.
ಲಕ್ಷಾಂತರ ಭಕ್ತರ ನಂಬಿಕೆಗೆ ಕಾರಣವಾಗಿರುವ ಈ ಧಾರ್ಮಿಕ ತೀರ್ಥಕ್ಷೇತ್ರದ ಪವಾಡಗಳು ಲೆಕ್ಕಕ್ಕೆ ಸಿಲುಕದ್ದು. ಆದರೆ ಅವುಗಳ ಅರ್ಥ ಮನಗಾಣಲು ನಂಬಿಕೆ ಅಗತ್ಯ. ಈಗ ನಾವು ಹೇಳಲು ಹೊರಟಿರುವ ಕತೆಯು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಬಂದಿದ್ದ ಒಂದು ಭಕ್ತ ಕುಟುಂಬದ ಅನುಭವ. ಇದು ಶ್ರೀನಿವಾಸನ ಪವಾಡವನ್ನು ನಮ್ಮ ಮುಂದೆ ಅನಾವರಣಗೊಳಿಸುತ್ತದೆ.
ಭಕ್ತಿಯ ಹರಕೆ
ಡೆಲ್ಲಿ ಮೂಲದ ಪ್ರತಿಮಾ ಮತ್ತು ಅವರ ಕುಟುಂಬ ಹಿಂದಿನ ಹಲವು ವರ್ಷಗಳಿಂದ ತಿರುಪತಿಗೆ ದರ್ಶನಕ್ಕಾಗಿ ಹೋಗುತ್ತಿದ್ದರು. ಅವರ ಮಗು ದೀಪಕ್ ಹುಟ್ಟು ಮೂಗನಾಗಿದ್ದ ಕಾರಣಕ್ಕೆ, ಪ್ರತಿಮಾ ದಂಪತಿಗಳು ನೊಂದಿದ್ದರು. ಮಗುವಿಗೆ ನಾಲ್ಕು ವರ್ಷವಾದಾಗ ಅವರಿಗೆ ಮಗು ಹುಟ್ಟು ಮೂಗ ಎನ್ನುವುದು ತಿಳಿದು ಅಘಾತವಾಗಿತ್ತು. ಅತ್ಯುತ್ತಮ ವೈದ್ಯರನ್ನು ಸಂಪರ್ಕಿಸಿ, ಎಲ್ಲ ರೀತಿಯ ಚಿಕಿತ್ಸೆಗೆ ಪ್ರಯತ್ನಿಸಿದರೂ ಫಲ ಸಿಕ್ಕಿರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎನ್ನುತ್ತಾ ಇಷ್ಟದೈವ ವೆಂಕಟರಮಣ ನೆನೆಯುತ್ತಾ ನೋವಿನ ನಡುವೆಯೂ ತಿರುಮಲಕ್ಕೆ ಭೇಟಿ ಕೊಟ್ಟರು.
ತಿಮ್ಮಪ್ಪನ ಸನ್ನಿಧಾನದಲ್ಲಿ “ಸ್ವಾಮೀ, ನನ್ನ ಮಗನಿಗೆ ಮಾತು ಬರುವಂತೆ ಕೃಪೆ ಕೋರಬೇಕು. ನಾನು ನಿನ್ನ ದರ್ಶನವನ್ನು ಮತ್ತೆ ಮತ್ತೆ ಮಾಡುತ್ತೇನೆ, ಎಂದು ಹರಕೆ ಕಟ್ಟಿಕೊಂಡರು.
ವರ್ಷಗಳು ಕಳೆದಂತೆ, ದೀಪಕ್ ನ ಆರೋಗ್ಯ ಸಮಸ್ಯೆಗಳು ಸುಧಾರಿಸಿದರೂ, ‘ಮಾತು’ ಮಾತ್ರ ಬಂದಿರಲಿಲ್ಲ. ಆದರೂ ಭಗವಂತನ ದರ್ಶನದಿಂದ ಅವರ ಮನಸ್ಸು ಸಮಾಧಾನಗೊಂಡಿತ್ತು. ಈ ಬಾರಿಯೂ ಪ್ರತಿಮಾ ದಂಪತಿಗಳು ದೀಪಕ್ ಅನ್ನು ಕರೆದುಕೊಂಡು ಮತ್ತೆ ಶ್ರೀನಿವಾಸನ ದರ್ಶನಕ್ಕೆ ಬಂದಿದ್ದರು.
ದೇವರ ಆವರಣಕ್ಕೆ ಪ್ರವೇಶಿಸಿದಾಗ, ದರ್ಶನಕ್ಕೆ ಬರುವ ದಾರಿಯಲ್ಲಿ ಪ್ರತಿಮಾಳ ಮನಸ್ಸು ತಿಮ್ಮಪ್ಪನ ಕರುಣೆಗಾಗಿ ಮೊರೆಯಿಟ್ಟಿತು.
ಸ್ವಾಮಿ, ಎಷ್ಟು ವರ್ಷಗಳಿಂದ ನಿನ್ನನ್ನ ಕೂಗುತ್ತಿದ್ದೇನೆ, ನನ್ನ ಮಗನಿಗೆ ನಿನ್ನ ಕೃಪೆದೃಷ್ಟಿಯನ್ನು ಬೀರು. ಇನ್ನು ಕಾಲಹರಣ ಬೇಡ. ಎಂದು ಅಂದುಕೊಳ್ಳುತ್ತಾ, ಹೆಜ್ಜೆ ಇಟ್ಟರು.. ವೆಂಕಟೇಶ್ವರನ ನಾಮ ಸ್ಮರಿಸುತ್ತಾ ದೇಗುಲದ ಆವರಣ ಪ್ರವೇಶಿಸಿದರು. ಬಳಿಕ ದೇವರಾ ದರ್ಶನ ಪಡೆದರು. ದೇವರ ದರ್ಶನ ಪಡೆದ ನಂತರ, ತೀರ್ಥ ಸ್ವೀಕರಿಸುವಾಗ ಅಸ್ಪಷ್ಟವಾಗಿ ದೀಪಕ್ “ಗೋವಿಂದ” ಎಂದು ಹೇಳಿದ.
ಆ ಕ್ಷಣಕ್ಕೆ, ಪ್ರತಿಮಾ ದಂಪತಿಗಳು ಕನಸು ಕಾಣುತ್ತಿದ್ದೇವೆ ಎಂಬ ಭಾವನೆ ಹೊಂದಿದರು. ಇದೇ ಸಂದರ್ಭದಲ್ಲಿ ದೀಪಕ್ ಮತ್ತೊಮ್ಮೆ ಸಣ್ಣದಾಗಿ ಗೋವಿಂದ! ಎಂದು ಮತ್ತೆ ಹೇಳಿದ. ಈ ಮಾತುಗಳನ್ನು ಕೇಳಿ ಪ್ರತಿಮಾ ದಂಪತಿಗಳು ಆನಂದಭರಿತರಾದರು. ನಿಮ್ಮ ಮಗ ಮಾತನಾಡುವುದಿಲ್ಲ ಎಂದಷ್ಟೇ ಕೇಳಿಸಿಕೊಂಡಿದ್ದ ತಾಯಿಯ ಹೃದಯಕ್ಕೆ ಮೊದಲ ಬಾರಿ ಅಮೃತ ಸುರಿದಂತಾಗಿತ್ತು. ಗೋವಿಂದಾ ಗೋವಿಂದ ಎನ್ನುತ್ತಿದ್ದ ದೀಪಕ್ ಮುಂದೆ ಅಮ್ಮ ಎಂದ. ಆ ತಾಯಿ ಹೃದಯಕ್ಕೆ ಇಷ್ಟು ಸಾಕಿತ್ತು.
ತಾಯಿ-ಮಗನ ನಡುವಿನ ಆ ಕ್ಷಣ ತಿರುಪತಿಯಲ್ಲಿ ಹಾಜರಿದ್ದ ಎಲ್ಲ ಭಕ್ತರಿಗೂ ಅಚ್ಚರಿ ಮೂಡಿಸಿತು. ಇಡೀ ದೇವಾಲಯದಲ್ಲಿ ಇದೊಂದು ಪವಾಡವಲ್ಲದೇ ಮತ್ತೇನು ಎಂಬ ಚರ್ಚೆ ಶುರುವಾಯಿತು. ದೇಗುಲದ ಆವರಣ ಗೋವಿಂದನ ನಾಮಸ್ಮರಣೆಯಿಂದ ಮಾರ್ಥನಿಸಿತು.
ಮಾಧ್ಯಮದವರು, ದೀಪಕ್ನ ಹಿಂದಿನ ವೈದ್ಯಕೀಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು, ಈ ಘಟನೆಯನ್ನು ಪ್ರಸಾರ ಮಾಡಿದರು. ಇದು ಶ್ರೀನಿವಾಸನ ಮಹಿಮೆ ಎಂದು ಎಲ್ಲರೂ ತಲೆಯಾಡಿಸಿದರು. ಈ ಘಟನೆ ತಿರುಮಲದ ಪವಾಡದ ದಾಖಲೆಗಳಲ್ಲಿ ಒಂದು ಎಂದು ಉಲ್ಲೇಖವಾಗಿದ್ದು, ಭಕ್ತರ ನಂಬಿಕೆಗೆ ಮತ್ತೊಂದು ಪುಷ್ಟಿ ನೀಡಿದೆ. ಅಂದ ಹಾಗೆ ಈ ಸತ್ಯ ಘಟನೆ ನಡೆದಿರೋದು ನೂರಾರು ವರ್ಷಗಳ ಹಿಂದೇನು ಅಲ್ಲ ಕಳೆದ 2014ರಲ್ಲಿ.
1979ರ ಬರ ಮತ್ತು ಶ್ರೀನಿವಾಸನ ಮಹಿಮೆ
ಅಂತಹ ಮತ್ತೊಂದು ಪ್ರಸಂಗವು ಹೀಗಿದೆ. 1979ರಲ್ಲಿ ತಿರುಪತಿಯಲ್ಲಿ ಭಯಾನಕ ಬರ ಬಂದಿತ್ತು. ಬೆಟ್ಟದ ಮೇಲಿನ ಜಲಮೂಲಗಳು ಬತ್ತಿ ಹೋಗಿದ್ದ ಕಾರಣ, ಭಕ್ತರು ದೇವಾಲಯದಲ್ಲೂ ನೀರಿನ ತೀವ್ರ ಕೊರತೆಯನ್ನು ಅನುಭವಿಸುತ್ತಿದ್ದರು. ಹನಿ ನೀರಿಗೂ ಹಾಹಾಕಾರ ಎದ್ದಿತ್ತು. ಟಿಟಿಡಿ ಆಡಳಿತ ಮಂಡಳಿ ತುರ್ತಾಗಿ ವೇದಪಂಡಿತರನ್ನು ಸಂಪರ್ಕಿಸಿ ಪರಿಹಾರವನ್ನು ಕೇಳಿದಾಗ, ವರುಣ ಹೋಮ ನಡೆಸುವುದು ಶ್ರೇಷ್ಠ ಪರಿಹಾರ ಎಂದು ಪಂಡಿತರು ಸಲಹೆ ನೀಡಿದರು.
ಆಗ ಟಿಟಿಡಿಯು ಈ ಯಾಗವನ್ನ ನೀವೇ ನಡೆಸಿಕೊಡಬೇಕು ಎಂದು ಮನವಿ ಮಾಡಿಕೊಂಡಿತು.
ಆದರೆ, ಪಂಡಿತರು ಯಾಗವನ್ನು ನಡೆಸಲು ತಮ್ಮ ವಯಸ್ಸಿನ ಕಾರಣದಿಂದ ನಿರಾಕರಿಸಿದರು ಮತ್ತು ವರುಣನನ್ನು ತೃಪ್ತಿಪಡಿಸಲು ಇನ್ನೊಬ್ಬ ಪಂಡಿತರನ್ನು ಸೂಚಿಸಿದರು. ವರುಣ ಹೋಮಕ್ಕೆ ಮುಹೂರ್ತ ಫಿಕ್ಸ್ ಮಾಡಿದರೂ, ಆ ಮುಹೂರ್ತದಲ್ಲಿ ಯಾಗದ ನೇತೃತ್ವ ವಹಿಸಿದ್ದ ಪಂಡಿತರ ಆರೋಗ್ಯದಲ್ಲಿ ಏರುಪೇರಾಯಿತು. ಹೀಗಾಗಿ ಇನ್ನೊಂದು ಮುಹೂರ್ತವನ್ನು ನಿಗದಿ ಮಾಡಲಾಯಿತು. ಆದರೆ ಆಗಲೂ ಅದನ್ನು ಪೂರ್ಣಗೊಳಿಸಲು ವಿವಿಧ ವಿಘ್ನಗಳು ಬಂದವು.
ಇನ್ನೊಂದು ವಾರ ಕಳೆದರೆ ಸ್ವಾಮಿಯ ಅಭಿಷೇಕಕ್ಕೂ ನೀರಿಲ್ಲ ಎನ್ನುವ ಪರಿಸ್ಥಿತಿ. ವಿಚಾರ ತಿಳಿದು ಮುಹೂರ್ತವನ್ನು ನಿಗದಿ ಮಾಡಿದ ಪಂಡಿತರು ಸ್ಥಳಕ್ಕೆ ಧಾವಿಸಿದ್ದರು.
ಅಂದಿನ ರಾತ್ರಿ, ಪಂಡಿತರು ಭಗವಂತನಿಗೆ ತಮ್ಮ ಶರಣಾಗತಿಯನ್ನು ಅರ್ಪಿಸಿ ದೇವರ ಮುಂದೆ ಕಣ್ಣೀರು ಹಾಕಿದರು. ಏನೀ ಪರೀಕ್ಷೆ ಸನಾತನ ಧರ್ಮ ಪೋಷಣೆ ಮಾಡುವ ಪ್ರಯತ್ನದಲ್ಲೇ ಜೀವನ ಕಳೆದ ನಾನು ಗೊತ್ತು ಮಾಡಿದ ಮುಹೂರ್ತಕ್ಕೂ ಇಷ್ಟೊಂದು ಸರಣಿ ಪರೀಕ್ಷೆಗಳೇ. ಈ ರೀತಿ ವಿಘ್ನಗಳಾದ್ರೆ ಹೇಗೆ. ನಿನ್ನ ದರುಶನಕ್ಕೆಂದು ಬೆಟ್ಟಕ್ಕೆ ಬರುವ ಭಕ್ತರ ಕಥೆ ಏನು. ಇನ್ನು ಮುಂದೆ ಅವರಿಗೆ ಯಾರು ದಿಕ್ಕೆಂದು ಪರಿಪರಿಯಾಗಿ ಕಣ್ಣೀರು ಹಾಕಿ ಬೇಡಿಕೊಂಡರು. ನಂತರ ಅಲ್ಲಿಂದ ಎದ್ದು ಬಂದರು.
ಆ ರಾತ್ರಿ ತಿರುಮಲದ ಮೌನದ ನಡುವೆ ನಡೆಯಿತು ಯಾರೂ ಊಹಿಸದ ಪವಾಡ, ದೇವಾಲಯದ ಮುಚ್ಚಿದ ಬಾಗಿಲ ಒಳಗಿನಿಂದ ಅದೊಂದು ಶಬ್ದ ಮೊಳಗಿತು. ನಡುರಾತ್ರಿ ಜಾರುತ್ತಲೇ ಗರ್ಭಗುಡಿಯ ಗಂಟೆಗಳು ದೊಡ್ಡ ಶಬ್ದ ಮಾಡಲಾರಂಭಿಸಿದವು. ಗಂಟೆಗಳ ಸದ್ದಿಗೆ ಇಡೀ ತಿರುಮಲದ ಭಕ್ತರಿಗೆ ಅರ್ಧ ರಾತ್ರಿಯಲ್ಲೇ ಎಚ್ಚರವಾಯಿತು. ಜಯ ವಿಜಯ ದ್ವಾರದಲ್ಲಿದ್ದ ಎರಡು ಗಂಟೆಗಳು ಶಬ್ದ ಮಾಡುತ್ತಲೇ ಇದ್ದವು. ಮುಚ್ಚಿರುವ ದೇಗುಲದಲ್ಲಿ ಗಂಟೆಗಳು ಹೇಗೆ ಶಬ್ದ ಮಾಡುತ್ತಿವೆ. ಯಾರಾದರೂ ಒಳಗೆ ಉಳಿದುಬಿಟ್ಟಿದ್ದಾರಾ ಎನ್ನುವ ಪ್ರಶ್ನೆ ಎದುರಾಯಿತು.
ಆ ಸಮಯದಲ್ಲಿ ಭಕ್ತರು ಪಂಡಿತರು ಪತ್ರಿಕಾ ಮಾಧ್ಯಮದವರು ಕೂಡ ಶಬ್ದ ಕೇಳಿ ಬೆಟ್ಟಕ್ಕೆ ಬಂದಿದ್ದರು. ಆದರೆ ಅರ್ಧ ರಾತ್ರಿಯಲ್ಲಿ ಗುಡಿಯ ಬಾಗಿಲು ತೆರೆಯುವಂತಿರಲಿಲ್ಲ. ಕಾರಣ ಶ್ರೀವಾರಿ ಸನ್ನಿಧಿಯಲ್ಲಿ ಆಚರಿಸಲಾಗುವ ಆಗಮ ಪದ್ಧತಿ. ಮುಂಜಾನೆ ಬಾಗಿಲು ತೆರೆಯುವವರೆಗೂ ಎಲ್ಲರೂ ಕಾದರು.
ಬಾಗಿಲು ತೆರೆದ ನಂತರ, ದೇವಾಲಯದಲ್ಲಿ ಏನೂ ಅಂತಹ ಅಸಾಮಾನ್ಯವಾದದ್ದು ಕಾಣಲಿಲ್ಲ. ಇಂಚಿಂಚು ಶೋಧ ನಡೆಸಿದರೂ ಅಲ್ಲಿ ಯಾವ ನರಪಿಳ್ಳೆಯು ಇರಲಿಲ್ಲ. ಯಾರು ಇಲ್ಲದ ಗುಡಿಯಲ್ಲಿ ಗಂಟೆ ಬಾರಿಸಿದೆ ಎಂದ ಮೇಲೆ ಇದು ಭಗವಂತನ ಪವಾಡ ಎಂದು ನಂಬಲಾಯಿತು. ತಕ್ಷಣವೇ ವರುಣ ಯಾಗವನ್ನು ಪುನಃ ಆರಂಭಿಸಲಾಯಿತು. ಮೂರ್ನಾಲ್ಕು ದಿನಗಳ ಕಾಲ ವೇದ ಘೋಷಗಳೊಂದಿಗೆ ಈ ಯಾಗ ಪ್ರಾರಂಭವಾಯಿತು. ಯಾಗದ ಕೊನೆಗೆ ಭಗವಂತನ ಅಭಿಷೇಕವು ವರಾಹಿ ದೇವಾಲಯದ ಬಳಿ ನಡೆಯಿತು.
ದೇವರ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ನಡೆಸಿದ ಯಾಗ ಸಂಪನ್ನವಾದ ನಂತರ, ಮೂರನೇ ದಿನವೇ ತಿರುಮಲದಲ್ಲಿ ಬಿರುಸಿನ ಮಳೆ ಸುರಿಯಿತು. ದೇವಾಲಯದ ಜಲಮೂಲಗಳು ಮತ್ತೆ ಮೈದುಂಬಿಕೊಂಡವು. ಅಂದಿನಿಂದ ಇಂದಿನವರೆಗೂ ತಿರುಮಲದಲ್ಲಿ ನೀರಿನ ಸಮಸ್ಯೆ ಮತ್ತೆಂದೂ ಎದುರಾಗಲೇ ಇಲ್ಲ. ತಿರುಮಲದಲ್ಲಿ ಜಲದ ಅವಶ್ಯಕತೆಯನ್ನು ಶ್ರೀನಿವಾಸನೇ ನಿರ್ವಹಿಸುತ್ತಿದ್ದಾನೆ ಎಂದು ಭಕ್ತರು ನಂಬಲು ಪ್ರಾರಂಭಿಸಿದರು.
ಈ ಘಟನೆಗಳು ತಿರುಮಲವನ್ನು ಮಾತ್ರವಲ್ಲ, ಇಡೀ ಜಗತ್ತಿನ ಭಕ್ತಾದಿಗಳನ್ನು ಆಕರ್ಷಿಸಿದೆ. ನಾವು ಶ್ರೀನಿವಾಸನ ನಾಮವನ್ನು ಭಕ್ತಿ ಪೂರ್ವಕವಾಗಿ ಉಚ್ಚರಿಸಿದಾಗ, ನಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮಹಾಶಕ್ತಿಯು ಹೃದಯದೊಳಗೆ ಮೂಡುತ್ತದೆ.