ಚಿಕ್ಕೋಡಿ : ಸರ್ಕಾರ ಸಂಕಷ್ಟದಲ್ಲಿದೆ ನಮ್ಮ ಸಂಕಷ್ಟವನ್ನು ಯಾರಿಗೆ ಹೇಳಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ನಿಪ್ಪಾಣಿ ಪಟ್ಟಣಲದಲ್ಲಿ ಅಂಬೇಡ್ಕರ್ ಭವನ ಹಾಗೂ ನೂತನ ಪ್ರವಾಸಿ ಮಂದಿರವನ್ನು ಗೋವಿಂದ ಕಾರಜೋಳ ಅವರು ಉದ್ಘಾಟಿಸಿದರು. ಈ ವೇಳೆ ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.
ಪ್ರವಾಸಿ ಮಂದಿರ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ಲಾಕ್ ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಶನಿವಾರ ಲಾಕ್ ಡೌನ್ ಮಾಡುವ ವಿಚಾರ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ. ಜನರ ಸುರಕ್ಷತೆಗಾಗಿ ಶನಿವಾರ ಹಾಗೂ ಭಾನುವಾರ ಲಾಕ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮದುವೆ ಕಾರ್ಯಕ್ರಮಗಳಿಂದ ಹೆಚ್ಚಿನ ಕೊರೊನಾ ಪ್ರಕರಣ ಬಂದ ಕಾರಣ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ ಎಂದರು.
ಇನ್ನು ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿಲ್ಲ ಎಂದ ಡಿಸಿಎಂ, ಸರ್ಕಾರ ಸಂಪೂರ್ಣ ಜವಾಬ್ದಾರಿಯುತ ಕೆಲಸ ಮಾಡುತ್ತಿದೆ. ಸಾವು ನೋವುಗಳನ್ನು ತಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿ ಕೆಲಸ ಮಾಡಿದೆ. ಆದರೆ ಸರ್ಕಾರ ಸಂಕಷ್ಟದಲ್ಲಿದೆ ನಮ್ಮ ಸಂಕಷ್ಟವನ್ನು ಯಾರಿಗೆ ಹೇಳಬೇಕು ಎಂದು ಬಸವಣ್ಣನ ವಚನ ಹೇಳಿದರು.