ಚಿಕ್ಕಬಳ್ಳಾಪುರ: ನನ್ನ ಕಡತವಿರಲಿ ಅಥವಾ ಸಾಮಾನ್ಯ ಜನರ ಕಡತಗಳಿರಲಿ, ಅವು ಕಾನೂನಿನ ಚೌಕಟ್ಟಿನಲ್ಲಿ ಮತ್ತು ನಿಯಮಗಳ ಪ್ರಕಾರ ಇದ್ದರೆ ಅಂತಹ ಕಡತಗಳನ್ನು ಅಧಿಕಾರಿಗಳು ವಿಲೇವಾರಿ ಮಾಡಲೇಬೇಕು. ನಿಯಮಗಳ ಉಲ್ಲಂಘನೆ ಆಗಿದ್ದರೆ ಆ ಕೆಲಸ ಮಾಡುವುದು ಬೇಡ. ಆದರೆ ಅದನ್ನು ಬಿಟ್ಟು ಅಧಿಕಾರ ಚಲಾಯಿಸಲು ಸರ್ಕಾರ ಇವರಪ್ಪನದ್ದಾ? ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ತಾಲೂಕಿನ ಪುರದಗಡ್ಡೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನು ನನ್ನ ರಾಜಕೀಯ ಜೀವನದಲ್ಲಿ ಪದೇ ಪದೆ ಯಾರ ಕಾಲನ್ನೂ ಹಿಡಿದು ಭಿಕ್ಷೆಗೆ ಹೋಗಿಲ್ಲ. ನಮ್ಮ ಮನೆಯ ಮುಂದೆ ದಿನದ 24 ಗಂಟೆ ಬಂದು ಕಾಯುತ್ತ ಭಿಕ್ಷೆ ಎತ್ತಿಲ್ಲ ಎಂದು ಪರೋಕ್ಷವಾಗಿ ಪ್ರದೀಪ್ ಈಶ್ವರ್ ಅವರ ನಡೆವಳಿಕೆಯನ್ನು ಟೀಕಿಸಿದರು.
ರಾಜಕೀಯ ದ್ವೇಷದ ಆಟ ನಡೆಯಲ್ಲ
ನನಗೆ ರಾಜಕೀಯ ದ್ವೇಷ ಇಲ್ಲ. ಒಂದು ವೇಳೆ ನಾನು ರಾಜಕೀಯ ಹಗೆತನ ಮತ್ತು ಸೇಡು ತೀರಿಸಿಕೊಳ್ಳಬೇಕೆಂದಿದ್ದರೆ ಇಂದು ಡಾ.ಎಂ.ಸಿ.ಸುಧಾಕರ್ ಅವರು ಶಾಸಕರೇ ಆಗುತ್ತಿರಲಿಲ್ಲ. ಡಾ.ಕೆ.ಸುಧಾಕರ್ ಕಡತಗಳನ್ನು ನಾನು ಕ್ಲಿಯರ್ ಮಾಡಿಕೊಟ್ಟೆ ಎಂದು ಹೇಳಿಕೊಳ್ಳುವ ಶಾಸಕ ಪ್ರದೀಪ್ ಈಶ್ವರ್ ಮಾತಿಗೆ ನನ್ನ ಧಿಕ್ಕಾರವಿದೆ. ಈ ಕ್ಷೇತ್ರದ ಶಾಸಕರು ಮಾತೆತ್ತಿದರೆ ದಲಿತರ ಉದ್ಧಾರ ಮಾಡುವೆ ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ದಲಿತರ ಮುಖಂಡರ ಮೇಲೆ ರಾಜಕೀಯ ದುರುದ್ದೇಶದಿಂದ ಸುಳ್ಳು ಪೋಕ್ಸೋ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸುಮಾರು 25ರಿಂದ 30 ಜನರ ಸಮ್ಮುಖದಲ್ಲಿ ಸಭೆ ನಡೆದ ನಂತರ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಐಜಿ ಅವರ ಜೊತೆ ಮಾತನಾಡಿದ್ದೇನೆ. ನೀವು ದಲಿತ ಮುಖಂಡರನ್ನು ಬಂಧಿಸಿ ನೋಡಿ, ನಿಮ್ಮಲ್ಲಿ ಒಬ್ಬರ ತಲೆದಂಡ ಆಗುವವರೆಗೆ ನಾನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದೇನೆ ಎಂದರು. ಯಾರೋ ಒಬ್ಬರು ಆತ್ಮಹತ್ಯೆ ಮಾಡಿಕೊಂಡರೆ ನನ್ನ ಮೇಲೆ ಉದ್ದೇಶ ಪೂರ್ವಕವಾಗಿ ಪ್ರಕರಣ ದಾಖಲಿಸುವ ಷಡ್ಯಂತ್ರ ನಡೆಯುತ್ತಿದೆ. ನಿಮ್ಮ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಬೇಕೆಂದಿದ್ದರೆ ನನಗೆ ನಿಮಗಿಂತಲೂ ಹೆಚ್ಚಿನ ಅಧಿಕಾರ ಇತ್ತು, ಆದರೆ ರಾಜಕೀಯಕ್ಕಾಗಿ ಸುಳ್ಳು ಪ್ರಕರಣಗಳನ್ನು ನಾನು ದಾಖಲಿಸಿಲ್ಲ ಎಂದು ಕಿಡಿಕಾರಿದರು.
ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು (ಚಿಮುಲ್) ತಂದ ಸಂತೃಪ್ತಿ ನನಗಿದೆ. ಅಂದು ಜಿಲ್ಲೆಗೆ ವೈದ್ಯಕೀಯ ಕಾಲೇಜು ತರಬೇಕು ಎಂದುಕೊಂಡಿದ್ದೆ, ಆ ಕೆಲಸವನ್ನೂ ಮಾಡಿ ಮುಗಿಸಿದ್ದೇನೆ. ಆದರೆ ಇಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರು ಒಕ್ಕೂಟವು ಕೋಲಾರದಲ್ಲಿಯೇ ಇರಲಿ ಎಂದು ಪ್ರತಿಪಾದಿಸಿದ್ದರು. ನಾನು ಹೈಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡಿ ಜಿಲ್ಲೆಗೆ ಒಕ್ಕೂಟವನ್ನು ತಂದಿದ್ದೇನೆ. ಇನ್ನೂ ಎರಡು ವರ್ಷಗಳ ನಂತರ ಮತ್ತೆ ನಮ್ಮ ಸರ್ಕಾರ ಬರುತ್ತದೆ. ಆಗ ಚಿಮುಲ್ನಲ್ಲಿ ಏನು ಬದಲಾವಣೆ ಮಾಡಬೇಕೋ ಆ ಕೆಲಸ ಮಾಡುತ್ತೇವೆ. ಸದ್ಯಕ್ಕೆ ಚಿಮುಲ್ ಚುನಾವಣೆಯನ್ನು ನಾನು ಬಹಳ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು.
ಹೆಸರು ಬದಲಾವಣೆ ಕಾಂಗ್ರೆಸ್ ಚಾಳಿ
ತುಮಕೂರಿನಲ್ಲಿ ಮಹಾತ್ಮ ಗಾಂಧಿ ಕ್ರೀಡಾಂಗಣದ ಹೆಸರನ್ನು ತೆಗೆದು ಪರಂ (ಡಾ.ಜಿ.ಪರಮೇಶ್ವರ್) ಅವರ ಹೆಸರು ಇಡಲು ಹೊರಟಿದ್ದಾರೆ. ದೇಶಕ್ಕೆ ಸಂಜಯ್ ಗಾಂಧಿ ಯಾವ ಕೊಡುಗೆ ನೀಡಿದ್ದಾರೆ? ಹೀಗಿದ್ದರೂ ಅವರ ಹೆಸರನ್ನು ಆಸ್ಪತ್ರೆಗೆ ಇಡಲಾಗಿದೆ. ಕೇವಲ ಒಂದೇ ಕುಟುಂಬದ ಹೆಸರನ್ನು ಸರ್ಕಾರದ ಯೋಜನೆಗಳಿಗೆ ಇಡಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ನೀತಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.








