10, 12ನೇ ತರಗತಿ ಆರಂಭಕ್ಕೆ ನಿರ್ಧಾರ
6, 7,8,9ನೇ ತರಗತಿಗಳಿಗೆ ವಿದ್ಯಾಗಮ
ಬೆಂಗಳೂರು: ಕಳೆದ 10 ತಿಂಗಳಿಂದ ಮುಚ್ಚಿರುವ ಶಾಲಾ-ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶಾಲಾ-ಕಾಲೇಜು ಆರಂಭದ ಬಗ್ಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಿಸಲು ತೀರ್ಮಾನಕ್ಕೆ ಬರಲಾಯಿತು.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸುಗಳ ಬಗ್ಗೆ ಸಭೆಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಜನವರಿ 1ರಿಂದಲೇ ಶಾಲಾ-ಕಾಲೇಜು ಆರಂಭಿಸಲಾಗುತ್ತಿದೆ. 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುವ ಕಾರಣ ತರಗತಿಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಶಾಲೆ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುವುದು ಕಡ್ಡಾಯವಲ್ಲ. ಪೋಷಕರ ಅನುಮತಿ ಪತ್ರ ಕೊಟ್ಟವರಿಗೆ ಮಾತ್ರ ತರಗತಿಗೆ ಹಾಜರಾಗಲು ಅನುಮತಿ ನೀಡಲಾಗುತ್ತಿದೆ. ಆನ್‍ಲೈನ್ ಹಾಗೂ ಆಫ್‍ಲೈನ್ ಮೂಲಕವೂ ತರಗತಿಗಳನ್ನು ಮುಂದುವರೆಸಬಹುದು.
ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೋವಿಡ್ ಮಾರ್ಗಸೂಚಿಗಳ ಅನ್ವಯ 10 ಮತ್ತು 12ನೇ ತರಗತಿಗಳ ಆರಂಭಿಸಲು ನಿರ್ಧರಿಸಲಾಗಿದೆ. 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮೂಲಕ ತರಗತಿ ಮಾಡಲು ಒಪ್ಪಿಗೆ ನೀಡಲಾಯಿತು ಎಂದು ತಿಳಿಸಿದರು.
ಶಾಲಾ ಆವರಣದಲ್ಲಿಯೇ ವಿದ್ಯಾಗಮ
ಜನವರಿ 1ರಿಂದ 10 ಹಾಗೂ 12ನೇ ತರಗತಿ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಸಿದೆ. ಆದರೆ, 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮೂಲಕ ತರಗತಿ ನಡೆಸಲು ತೀರ್ಮಾನಿಸಲಾಗಿದೆ. ವಾರದಲ್ಲಿ 3 ದಿನ ಮಾತ್ರ ವಿದ್ಯಾಗಮ ತರಗತಿಗಳನ್ನು ನಡೆಸಲಾಗುವುದು.
ತರಗತಿಗಳ ಆರಂಭಕ್ಕೆ ಕೋವಿಡ್ ಮಾರ್ಗಸೂಚಿ ಹಾಗೂ ವೇಳಾಪಟ್ಟಿಯನ್ನು ಸಂಜೆ ಪ್ರಕಟಿಸುವುದಾಗಿ ಸರ್ಕಾರ ತಿಳಿಸಿದೆ. ಶಾಲೆಗಳ ಆವರಣದಲ್ಲಿ ಮಾತ್ರ ವಿದ್ಯಾಗಮ ತರಗತಿಗಳನ್ನು ನಡೆಸಲಾಗುವುದು. ವಾರದಲ್ಲಿ 3 ದಿನ ಮಾತ್ರ ತರಗತಿಗಳು ಇರಲಿವೆ. ಒಂದು ತರಗತಿಯಲ್ಲಿ 15 ವಿದ್ಯಾರ್ಥಿಗಳು ಮೀರುವಂತಿಲ್ಲ. 15 ವಿದ್ಯಾರ್ಥಿಗಳನ್ನು ಒಳಗೊಂಡ 7-8 ತಂಡಗಳನ್ನಾಗಿ ಮಾಡಿ ತರಗತಿ ಆರಂಭಿಸಬೇಕು ಎಂಬ ನಿಯಮ ಜಾರಿಗೆ ತರಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿದ್ಯಾಗಮ ತರಗತಿಗಳಿಗೆ ಬರುವ ವಿದ್ಯಾರ್ಥಿಗಳು ಶೀತ-ನೆಗಡಿ ಸಮಸ್ಯೆ ಇಲ್ಲ ಎಂಬ ಪ್ರಮಾಣ ಪತ್ರ ತರಬೇಕು. ಶಾಲೆಗಳ ಜತೆಗೆ ಹಾಸ್ಟೆಲ್‍ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಹಾಸ್ಟೆಲ್‍ಗೆ ಬರುವ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ರಿಪೋರ್ಟ್ ತರುವುದು ಕಡ್ಡಾಯವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel