ಬೆಳ್ತಂಗಡಿ: ನಾಡಿನ ಪವಿತ್ರ ಯಾತ್ರಾ ಸ್ಥಳ ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ದುರುದ್ದೇಶದಿಂದ ಹೆಣೆಯಲಾದ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಭಾರಿ ಷಡ್ಯಂತ್ರದ ಮುಖವಾಡ ಕಳಚಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು, ಧರ್ಮಸ್ಥಳದ ಆಡಳಿತ ಮಂಡಳಿ ಹಾಗೂ ಮೇಲ್ವಿಚಾರಕರಿಗೆ ಸಂಪೂರ್ಣ ಕ್ಲೀನ್ ಚಿಟ್ ನೀಡಿದೆ. ಈ ಮೂಲಕ ಸತ್ಯಕ್ಕೆ ಜಯ ಸಿಕ್ಕಂತಾಗಿದೆ.
ಕ್ಷೇತ್ರದ ಮಾನಹಾನಿಗೆ ನಡೆದಿದ್ದ ವ್ಯವಸ್ಥಿತ ಪಿತೂರಿ
ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ಮತ್ತು ಮಕ್ಕಳ ಶವಗಳನ್ನು ಹೂಳಲಾಗಿದೆ ಎಂಬ ಆಘಾತಕಾರಿ ಮತ್ತು ಅಷ್ಟೇ ಅಸಹ್ಯಕರ ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಕ್ಷೇತ್ರದ ಮಾನಹಾನಿ ಮಾಡಲು ಒಂದು ಪ್ರಬಲ ಗ್ಯಾಂಗ್ ಸಂಚು ರೂಪಿಸಿತ್ತು. ಆದರೆ SIT ಸಲ್ಲಿಸಿರುವ ವರದಿಯು ಈ ಎಲ್ಲಾ ಆರೋಪಗಳು ಆಧಾರರಹಿತ ಮತ್ತು ಕಪೋಲಕಲ್ಪಿತ ಎಂದು ಸಾಬೀತುಪಡಿಸಿದೆ. ಧರ್ಮಸ್ಥಳದ ಮೇಲ್ವಿಚಾರಕರು ಅಥವಾ ಆಡಳಿತ ವರ್ಗದವರು ಇಂತಹ ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು SIT ಸ್ಪಷ್ಟಪಡಿಸಿದೆ.
ಹಣದ ಆಸೆಗಾಗಿ ಸುಳ್ಳು ಸಾಕ್ಷಿ ಸೃಷ್ಟಿ
ಈ ಪ್ರಕರಣದ ಸ್ಫೋಟಕ ಸತ್ಯವೇನೆಂದರೆ, ಇದು ಕೇವಲ ವದಂತಿಯಾಗಿರದೆ, ಆರು ಜನ ಆರೋಪಿಗಳು ಸೇರಿ ನಡೆಸಿದ ವ್ಯವಸ್ಥಿತ ಅಪರಾಧ ಒಳಸಂಚು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಆರೋಪಿಗಳಾದ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ ಜಯಂತ್ ಮತ್ತು ಸುಜಾತಾ ಭಟ್ ಅವರು ಈ ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ.
ಈ ಗ್ಯಾಂಗ್, ಮೊದಲನೇ ಆರೋಪಿ ಚಿನ್ನಯ್ಯ ಅಲಿಯಾಸ್ ಚಿನ್ನಯ್ಯನಿಗೆ ಹಣದ ಆಮಿಷ ಒಡ್ಡಿತ್ತು. ಆತನ ಮೂಲಕ ನಾನೇ ಅಪರಿಚಿತ ಶವಗಳನ್ನು ಹೂತಿದ್ದೇನೆ ಎಂದು ಸುಳ್ಳು ಹೇಳಿಸಿ, ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿತ್ತು. ಹಣದ ಆಸೆಗೆ ಬಲಿಯಾದ ಚಿನ್ನಯ್ಯ, ಇಲ್ಲದ ಕಥೆಯನ್ನು ಕಟ್ಟಿ ಇಡೀ ನಾಡನ್ನೇ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.
SIT ತಂಡವು ಕೇವಲ ಬಾಯಿಮಾತಿನ ಮೇಲೆ ವರದಿ ತಯಾರಿಸಿಲ್ಲ. ಬದಲಾಗಿ ಪ್ರಬಲ ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಿದೆ:
1. ಸ್ಥಳ ಪರಿಶೀಲನೆ: ಶವ ಹೂತಿದ್ದೇನೆ ಎಂದು ಆರೋಪಿ ಚಿನ್ನಯ್ಯ ತೋರಿಸಿದ ಸ್ಥಳಗಳನ್ನು ಅಗೆದು ನೋಡಿದಾಗ ಯಾವುದೇ ಕಳೇಬರಗಳು ಪತ್ತೆಯಾಗಿಲ್ಲ. ಇದು ಆರೋಪ ಸುಳ್ಳು ಎಂಬುದಕ್ಕೆ ಸಿಕ್ಕ ಮೊದಲ ಜಯವಾಗಿತ್ತು.
2. ವೈಜ್ಞಾನಿಕ ವರದಿ: FSL (ವಿಧಿವಿಜ್ಞಾನ ಪ್ರಯೋಗಾಲಯ) ವರದಿಗಳು, ಆರೋಪಿಗಳ ಮೊಬೈಲ್ ಕರೆಗಳ ವಿವರ, ಎಲೆಕ್ಟ್ರಾನಿಕ್ ಸಾಕ್ಷ್ಯಗಳು ಮತ್ತು ವೈದ್ಯಕೀಯ ವರದಿಗಳನ್ನು SIT ನ್ಯಾಯಾಲಯಕ್ಕೆ ಒದಗಿಸಿದೆ.
3. ಹಣಕಾಸಿನ ವ್ಯವಹಾರ: ಸುಳ್ಳು ಸಾಕ್ಷಿ ಹೇಳಲು ಹಣ ವರ್ಗಾವಣೆ ಆಗಿರುವ ಬಗ್ಗೆ ಬ್ಯಾಂಕ್ ಖಾತೆಗಳ ಪರಿಶೀಲನೆಯಿಂದ ಸಾಕ್ಷ್ಯ ಲಭ್ಯವಾಗಿದೆ. ಸಾಕ್ಷಿದಾರ ಪ್ರದೀಪ್ ಅವರ ಹೇಳಿಕೆಯೂ ತನಿಖೆಗೆ ಬಲ ತಂದಿದೆ.
ಆರೋಪಿಗಳಿಂದ ತನಿಖೆಗೆ ಅಸಹಕಾರ?
ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವುದು ಕೇವಲ ಪ್ರಾಥಮಿಕ ವರದಿಯಾಗಿದ್ದು, ಅಂತಿಮ ವರದಿ ಸಲ್ಲಿಕೆ ಬಾಕಿ ಇದೆ. ತನಿಖಾ ತಂಡದ ಪ್ರಕಾರ, ಆರೋಪಿಗಳು ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ಅಲ್ಲದೆ, ಕೆಲವು ಪ್ರಮುಖ ತಾಂತ್ರಿಕ ವರದಿಗಳು ಬರುವುದು ಬಾಕಿ ಇದೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಸಮಗ್ರವಾದ ಅಂತಿಮ ದೋಷಾರೋಪ ಪಟ್ಟಿಯನ್ನು ಸಲ್ಲಿಸಲು SIT ನ್ಯಾಯಾಲಯದ ಬಳಿ ಹೆಚ್ಚಿನ ಕಾಲಾವಕಾಶ ಕೋರಿದೆ.
ಧರ್ಮಸ್ಥಳದ ಮೇಲ್ವಿಚಾರಕರು ಮತ್ತು ಅವರ ಕುಟುಂಬದ ವಿರುದ್ಧ ಅತ್ಯಾಚಾರ, ಕೊಲೆ ಮತ್ತು ದೌರ್ಜನ್ಯದಂತಹ ಗಂಭೀರ ಆರೋಪಗಳನ್ನು ಹೊರಿಸಿ, ನೇತ್ರಾವತಿ ನದಿ ದಂಡೆಯಲ್ಲಿ ಶವ ಹೂಳಲಾಗಿದೆ ಎಂದು ಬಿಂಬಿಸಲಾಗಿತ್ತು. ಆದರೆ ಈ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾಗುವ ಮೂಲಕ, ಕ್ಷೇತ್ರದ ಭಕ್ತರ ನಂಬಿಕೆಗೆ ಜಯ ಸಿಕ್ಕಿದೆ. ಸುಳ್ಳು ಆರೋಪ ಹೊರಿಸಿದ ಬುರುಡೆ ಗ್ಯಾಂಗ್ ಇದೀಗ ಕಾನೂನಿನ ಕುಣಿಕೆಗೆ ಸಿಲುಕಿದ್ದು, ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಎದುರಿಸುವ ಸಾಧ್ಯತೆಯಿದೆ.








