ಬೆಂಗಳೂರು: ಮನುಷ್ಯ ಸೇರಿದಂತೆ ಪ್ರಾಣಿಗಳಲ್ಲಿ ಕೂಡ ಪರಸ್ಪರ ಕಿತ್ತಾಟವನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಇಲ್ಲೊಂದು ಕಡೆ ಹೆಬ್ಬಾವು ಮತ್ತು ಕಾಳಿಂಗ ಸರ್ಪಗಳ ಕಚ್ಚಾಟದಲ್ಲಿ ಎರಡೂ ಪ್ರಾಣ ಕಳೆದುಕೊಂಡಿವೆ.
ಉರಗ ಕದನದ ಫೋಟೋವೊಂದನ್ನು ಐಎಫ್ಎಸ್ ಅಧಿಕಾರಿ ಸುಸಾಂತ ನಂದ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೆಬ್ಬಾವು ಕಾಳಿಂಗ ಸರ್ಪವನ್ನು ಬಿಗಿದುಕೊಂಡರೆ, ಕಾಳಿಂಗ ಸರ್ಪ ಹೆಬ್ಬಾವಿಗೆ ಕಚ್ಚಿದೆ. ಹೀಗಾಗಿ ಒಂದು ಉಸಿರುಗಟ್ಟಿ ಸಾವನ್ನಪ್ಪಿದರೆ, ಇನ್ನೊಂದು ವಿಷದಿಂದ ಸಾವನ್ನಪ್ಪಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ನಾವು ಮನುಷ್ಯರು ಕೂಡ ಹೀಗೆ ಪರಸ್ಪರ ನಾಶ ಮಾಡಿಕೊಳ್ಳುತ್ತೇವೆ. ಇತಿಹಾಸ ಇಂಥ ಹುಚ್ಚಾಟಗಳಿಗೆ ಸಾಕ್ಷಿಯಾಗುತ್ತಿರುತ್ತದೆ ಎಂಬ ಸಂದೇಶವನ್ನು ಕೂಡ ಅವರು ನೀಡಿದ್ದಾರೆ. ಹೆಬ್ಬಾವು ಮೊದಲು ಕಾಳಿಂಗದ ಮೇಲೆ ಎರಗಿ, ಬಿಗಿದುಕೊಂಡಿದ್ದು, ಆಗ ರೊಚ್ಚಿಗೆದ್ದ ಕಾಳಿಂಗ ಕಚ್ಚಿದೆ.








