ಕೊಡವರ ನಾಡಿನಲ್ಲಿ ಮರಣ ಸದೃಶ್ಯ ಮಳೆ; ಭೂಕುಸಿತದಿಂದ ತಲಕಾವೇರಿ ಅರ್ಚಕರ ಇಡೀ ಕುಟುಂಬವೇ ಸಮಾಧಿ
ಕೊಡಗಿನಲ್ಲಿ ಮತ್ತೆ ವರುಣ ವಿಪ್ಲವ ತಾಂಡವವಾಡುತ್ತಿದೆ. ಕಳೆದೆರಡು ದಿನಗಳಿಂದ ಜೋರು ಗಾಳಿ ಭೋರ್ಗರೆದು ಸುರಿಯುತ್ತಿರುವ ಕುಂಭದ್ರೋಣ ಮಳೆ ಮತ್ತೆ ಜಲಪ್ರವಾಹ ಮತ್ತು ಭೂಕುಸಿದ ಆತಂಕ ಸೃಷ್ಟಿಸಿದೆ. ಅಸಂಖ್ಯಾತ ಜನ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸದೇ ಇರಲಿ ಎಂದು ಪ್ರಾರ್ಥಿಸಿಕೊಳ್ಳುವಷ್ಟರಲ್ಲಿ ಬರ ಸಿಡಿಲಿನಂತೆ ಬಂದೆರಗಿದೆ ಒಂದು ದುರಂತದ ವರ್ತಮಾನ.
ತಲಕಾವೇರಿಯಲ್ಲಿ 6 ರಿಂದ 7 ಕಿಲೋ ಮೀಟರ್ ಸುತ್ತಳತೆಯಲ್ಲಿ ಭೂಕುಸಿತ ಸಂಭವಿಸಿದೆ. ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ನಾರಾಯಣ ಆಚಾರ್ ಅವರ ಮನೆಯ ಮೇಲೆ ಪೂರ್ಣ ಗುಡ್ಡವೇ ಕುಸಿದು ಕುಳಿತಿದೆ. ನಾರಾಯಣ ಆಚಾರ್ ಹಾಗೂ ಅವರ ಪತ್ನಿ ಮತ್ತು ಇನ್ನಿಬ್ಬರು ಅರ್ಚಕರು ಭೂಸಮಾಧಿಯಾಗಿರುವ ಶಂಕೆಯಿದೆ. ಅವರ ಮನೆಯ ಕುರುಹೇ ಕಾಣುತ್ತಿಲ್ಲ. 30 ಅಡಿಗಳಿಗಿಂತಲೂ ಹೆಚ್ಚಿನ ಮಣ್ಣ ರಾಶಿ ಅವರ ಮನೆಯ ಮೇಲೆ ಬಿದ್ದಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಭಾರೀ ಮಳೆ & ಮಂಜಿನಿಂದಾಗಿ ರಕ್ಷಣಾ ಕಾರ್ಯಾಚರಣೆ ಸಧ್ಯಕ್ಕೆ ಸ್ಥಗಿತಗೊಂಡಿದೆ. ಭಾಗಮಂಡಲದಲ್ಲಿ ಕಾವೇರಿ ಉಕ್ಕಿ
ಹರಿದ ಪರಿಣಾಮವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಾಗಾಗಿ ಜೆಸಿಬಿ ಇತ್ಯಾದಿ ವಾಹನಗಳಿಗೆ ದುರಂತದ ಸ್ಥಳಕ್ಕೆ ಬರಲಾಗುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುಡ್ಡ ಕುಸಿದ ಮೊದಲು ನಾರಾಯಣ ಆಚಾರ್ ಅವರ ಮನೆ ಮತ್ತು ಭೂಕುಸಿತದ ನಂತರದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.








