ಸಾವಿನ ಮನೆ ಹಾಗೂ ಕಲ್ಯಾಣ ಮಂಟಪಕ್ಕೆ ನುಗ್ಗಿ ದೋಚಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ವಿವೇಕ್ (23) ಎಂಬಾತನೇ ಈ ಖತರ್ನಾಕ್ ಕಳ್ಳ. ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಈತ ಸಾವಿನ ಮನೆಗಳನ್ನೇ ಟಾರ್ಗೆಟ್ ಮಾಡಿ ದೋಚಿ ಪರಾರಿಯಾಗುತ್ತಿದ್ದ. ಎಲ್ಲರೂ ಅಂತ್ಯಸಂಸ್ಕಾರಕ್ಕೆ ಹೋದ ಸಂದರ್ಭದಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ. ಆನಂತರ ಚಿನ್ನಾಭರಣ ಅಡವಿಟ್ಟು ಮೋಜು-ಮಸ್ತಿ ಮಾಡುತ್ತಿದ್ದ.
ಇತ್ತೀಚೆಗೆ ಈ ಖದೀಮ, ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಶಿವಕುಮಾರ್ ಎಂಬುವವರ ಮನೆಗೆ ನುಗ್ಗಿ 135 ಗ್ರಾಂ ಚಿನ್ನಾಭರಣ ದೋಚಿದ್ದ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದ್ದು, ಆತನಿಂದ 36 ಲಕ್ಷ ರೂ. ಮೌಲ್ಯದ 521 ಗ್ರಾಂ ಚಿನ್ನಾಭರಣ ಹಾಗೂ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.