ನಿಲ್ಲದ ಕೋರೊನಾ ಸ್ಫೋಟ: ಇಂದು ಬರೋಬ್ಬರಿ 71ಜನರ ಜೀವ ತೆಗೆದ ಮಹಾಮಾರಿ
ಬೆಂಗಳೂರು: ಭಾನುವಾರ ಲಾಕ್ ಡೌನ್ ನಡುವೆಯೂ ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸ್ಫೋಟ ಮುಂದುವರೆದಿದೆ.
ಇಂದು ಬರೋಬ್ಬರಿ 2627 ಮಂದಿಗೆ ಕೊರೊನಾ ವಕ್ಕರಿಸಿದ್ದು, 71ಜನರ ಉಸಿರು ನಿಲ್ಲಿಸಿದೆ.
ರಾಜ್ಯದ ಕೊರೊನಾ ಸೋಂಕಿತರ ಸಂಖ್ಯೆ 38,843ಕ್ಕೆ ಏರಿದ್ದು, ಒಟ್ಟು ಮೃತರ ಸಂಖ್ಯೆ ಕೂಡಾ 684ಕ್ಕೆ ಬಂದು ನಿಂತಿದೆ.
ರಾಜಧಾನಿ ಬೆಂಗಳೂರು ನಗರದಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಇಂದು ಇದೇ ಮೊದಲ ಬಾರಿಗೆ 1525 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರ ಜೊತೆಗೆ ಇಂದು 45 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ.
ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ ಎಂಬುದಕ್ಕೆ ಬೆಂಗಳೂರು ನಗರದಲ್ಲಿ ಇಂದು ಪತ್ತೆಯಾದ ಪಾಸಿಟಿವ್ ಹಾಗೂ ಸಾವಿನ ಸಂಖ್ಯೆ ಪುಷ್ಟಿ ನೀಡುತ್ತದೆ.

ಬೆಂಗಳೂರು ನಂತರ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 196 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಐವರು ಬಲಿಯಾಗಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 42 ಜನರಿಗೆ ಮಹಾಮಾರಿ ವಕ್ಕರಿಸಿದ್ದು 3 ಮಂದಿ ಬಲಿ ಪಡೆದಿದೆ.
ಧಾರವಾಡ ಜಿಲ್ಲೆಯಲ್ಲಿ 129 ಹೊಸ ಕೇಸ್ ಗಳು ದಾಖಲಾಗಿದ್ದರೆ ಯಾದಗಿರಿ ಜಿಲ್ಲೆಯಲ್ಲಿ 120 ಮಂದಿಗೆ ಪಾಸಿಟಿವ್ ಬಂದಿದೆ. ಆದರೆ ಇಂದು ಯಾವುದೇ ಸಾವಿನ ವರದಿ ಬಂದಿಲ್ಲ.
ಕಲಬುರಗಿ ಜಿಲ್ಲೆಯಲ್ಲಿ 78 ಕೊರೊನಾ ಪ್ರಕರಣಗಳು ದಾಖಲಾಗಿದ್ದರೆ, ಬಳ್ಳಾರಿ ಜಿಲ್ಲೆಯಲ್ಲಿ 63 ಹೊಸ ಕೇಸ್ ದಾಖಲಾಗಿದೆ.

ವಿಜಯಪುರ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ.








