ಬೆಂಗಳೂರು: ರಾಜ್ಯದಲ್ಲಿ ಭಾನುವಾರವೂ ಕೂಡ ಕೊರೊನಾ ಆರ್ಭಟ ಮುಂದುವರೆದಿದೆ. ರಾಜ್ಯದಲ್ಲಿ ಇಂದು 5199 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 82 ಜನರ ಉಸಿರು ನಿಂತೇ ಹೋಗಿದೆ.
ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 96,141 ಏರಿಕೆಯಾಗಿದ್ದು, ಒಂದು ಲಕ್ಷ ದಾಟಲು ಕೇವಲ ನಾಲ್ಕು ಸಾವಿರ ಮಾತ್ರ ಬಾಕಿ ಇದೆ. ಕೊರೊನಾ ನಾಗಾಲೋಟ ನಾಳೆಯೂ ಹೀಗೆಯೇ ಮುಂದುವರೆದರೆ ಈ ಸಂಖ್ಯೆ 1 ಲಕ್ಷ ದಾಟುವುದರಲ್ಲಿ ಯಾವುದೇ ಅನುಮಾನ ಇಲ್ಲ.
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಿದ್ದು, 1950 ಮಂದಿಗೆ ಹೆಮ್ಮಾರಿ ವಕ್ಕರಿಸಿದೆ. ಇದರ ಜತೆಗೆ ಇಂದು 29 ಜನರ ಉಸಿರು ನಿಲ್ಲಿಸಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 45,453ಕ್ಕೆ ಏರಿಕೆಯಾಗಿದ್ದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 33,156ಕ್ಕೆ ತಲುಪಿದೆ.
ಇಂದು 29 ವರ್ಷದ ಯುವತಿ ಸೇರಿ 29 ಮಂದಿ ಬಲಿಯಾಗಿದ್ದಾರೆ. ಜಯನಗರದ ನಿವಾಸಿಯಾದ 29 ವರ್ಷದ ಯುವತಿಗೆ ಆಸ್ಪತ್ರೆಗೆ ದಾಖಲಾಗುವ ಮೊದಲೇ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಬೆಂಗಳೂರನ್ನು ಹಿಂದಿಕ್ಕುವ ಭರದಲ್ಲಿ ಓಡುತ್ತಿರುವಂತೆ 12 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 100ರ ಕೆಳಗೆ ಇಳಿದೇ ಇಲ್ಲ. ಬಳ್ಳಾರಿಯಲ್ಲಿ ಬರೋಬ್ಬರಿ 570 ಮಂದಿಗೆ ಕೋವಿಡ್ ಬಂದಿದ್ರೆ ಇಂದು ಯಾವುದೇ ಸಾವು-ನೋವು ಸಂಭವಿಸಿಲ್ಲ.
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಏರುಗತಿ ಆತಂಕ ಹುಟ್ಟಿಸುತ್ತಿದೆ. ಕಳೆದ ಒಂದು ವಾರದಿಂದ 200 ಗಡಿ ದಾಟುತ್ತಿದ್ದು, ಇಂದು 230 ಮಂದಿಗೆ ವೈರಸ್ ತಗುಲಿದೆ. ಇಂದು ಒಂದೇ ದಿನ 5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರಿಂದ ಮೈಸೂರು ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 112ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಬೆಂಗಳೂರು ನಗರ ಹೊರತುಪಡಿಸಿ ಮೈಸೂರು 112 ಸಾವಿನೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿರುವುದು ಗಾಬರಿ ಹುಟ್ಟಿಸುತ್ತಿದೆ.
ಕೊರೊನಾ ಹೆಚ್ಚು ಪ್ರಕರಣಗಳು ಹೊಂದಿರುವ ಜಿಲ್ಲೆಗಳು..
ಬೆಂಗಳೂರು ನಗರ-1950
ಬಳ್ಳಾರಿ-579
ಮೈಸೂರು-230
ಬೆಂಗಳೂರು ಗ್ರಾಮಾಂತರ-213
ದಕ್ಷಿಣ ಕನ್ನಡ-199
ಉಡುಪಿ-169
ಧಾರವಾಡ-165
ಹಾಸನ-164
ಬೆಳಗಾವಿ-163
ಕಲಬುರಗಿ-152
ವಿಜಯಪುರ-132
ರಾಯಚೂರು-131








