ಬೆಂಗಳೂರು: 2018ರ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿನ ಆರೋಪ ಪ್ರತ್ಯಾರೋಪ, ಏಟು-ಎದಿರೇಟು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ, ನಳಿನ್ಕುಮಾರ್ರಂತ ಘಟಾನುಘಟಿಗಳ ಮಾತಿನ ಅಬ್ಬರ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಈ ನಡುವೆ ಸಿದ್ದರಾಮಯ್ಯ ತಮ್ಮ ಸೋಲಿನ ಹೇಳಿಕೆಯನ್ನೇ ರಾಜ್ಯದ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಟೀಕಿಸುವ ಮೂಲಕ ತಮ್ಮ ರಾಜಕೀಯದ ಅಸ್ತಿತ್ವಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ವಾಸ್ತವ ಎಂದು ಸತ್ಯ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡು ವಿಧಾನ ಪರಿಷತ್ತಿನಲ್ಲಿ ಪ್ರತ್ಯೇಕ ಗುಂಪು ಮಾಡಿ ಜೆಡಿಎಸ್ ಒಡೆಯಲು ಪ್ರಯತ್ನಿಸಿದ ಬಸವರಾಜ ಹೊರಟ್ಟಿ ರಾಜಕೀಯ ವಿಶ್ರಾಂತಿ ಪಡೆಯಲು ದೇವೇಗೌಡರಿಗೆ ಸಲಹೆ ನೀಡಿದ್ದಾರೆ.
2017 ರಲ್ಲಿ 37 ಸ್ಥಾನ ಪಡೆದ ಹೆಚ್ಡಿಕೆ ಮುಖ್ಯಮಂತ್ರಿ ಸ್ಥಾನದ ಬದಲು, ಉಪಮುಖ್ಯಮಂತ್ರಿ ಸ್ಥಾನ ಪಡೆದು ಸಮ್ಮಿಶ್ರ ಸರ್ಕಾರ ರಚನೆ ಆಗಿದ್ದರೆ 5 ವರ್ಷ ಪೂರೈಸಬಹುದಿತ್ತು. ಈ ನಿಟ್ಟಿನಲ್ಲಿ ಪಕ್ಷದೊಳಗೆ ಅಥವಾ ಶಾಸಕರೊಂದಿಗೆ ಚರ್ಚೆಗೆ ಅಂದು ಅವಕಾಶ ನೀಡಲೇ ಇಲ್ಲ. ಮುಖ್ಯಮಂತ್ರಿಯಾಗಿ ಜೆಡಿಎಸ್ ಶಾಸಕರನ್ನೇ ಹಿಡಿದಿಟ್ಟುಕೊಳ್ಳದ ಹೆಚ್ಡಿಕೆ, ಕಾಂಗ್ರೆಸ್ ಪಕ್ಷ ಟೀಕಿಸುವ ನೈತಿಕ ಶಕ್ತಿ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಆರೋಪಿಸಿದ್ದಾರೆ.
ಒಬ್ಬ ಮುಖ್ಯಮಂತ್ರಿ ಹೋಟೆಲ್ ವಾಸ್ತವ್ಯ ರಾಜ್ಯದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದ್ದು ರಾಜ್ಯದ ಶಾಸಕರೇ ಅವರನ್ನು ಭೇಟಿಯಾಗಲು ಆಗಲಿಲ್ಲ. ಧಣಿದ ಮುಖ್ಯಮಂತ್ರಿಗೆ ವಿಶ್ರಾಂತಿ ಪಡೆಯಲು ಕುಮಾರ ಕೃಪ ಅತಿಥಿ ಗೃಹದ ಜೊತೆಗೆ ಹತ್ತಾರು ಸರಕಾರಿ ಅತಿಥಿ ಗೃಹ ಇರುವಾಗ ದಾರಿ ತಪ್ಪಿಸುವರ ಮಾತು ಕೇಳಿ ಖಾಸಗಿ ದರ್ಬಾರು ಮಾಡಲು ಹೋಟೆಲ್ ಸೇರಿದ್ದು ಸುಳ್ಳೇ?
ಸಿದ್ದರಾಮಯ್ಯ ಪ್ರಾದೇಶಿಕ ಪಕ್ಷ ಮಾಡಲು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಜೆಡಿಎಸ್ ಪಕ್ಷ ಜನತಾ ಪಕ್ಷದ ಪಳಯುಳಿಕೆ ಆಗಿದ್ದು ಕರ್ನಾಟಕದಲ್ಲಿ ಮೂಲ ಕಾರ್ಯಕರ್ತರ ಕಾರಣಕ್ಕಾಗಿ ಉಳಿದುಕೊಂಡಿದೆ. ಹೆಚ್ಡಿಕೆ ಅವರಿಗೆ ಪ್ರಾದೇಶಿಕ ಪಕ್ಷದ ಮೇಲೆ ನಿಜವಾದ ಪ್ರೀತಿ ಇದ್ದರೆ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕುವ ಬದಲು 1989 ರಲ್ಲಿ ದೇವೇಗೌಡರು ಕಟ್ಟಿದ ಪ್ರಾದೇಶಿಕ ಪಕ್ಷ ಸಮಾಜವಾದಿ ಜನತಾ ಪಕ್ಷವನ್ನು ಕಟ್ಟಿ ತಮ್ಮ ಶಕ್ತಿ ತೋರಿಸಲಿ. ಬೇಕಿದ್ದರೆ ವೈಎಸ್ವಿ ದತ್ತ ಮಾರ್ಗದರ್ಶನ, ಸಲಹೆ ನೀಡುತ್ತಾರೆ.
ಚಾಮುಂಡೇಶ್ವರಿ, ವರುಣ ಮತ್ತು ಬಾದಾಮಿ ಮೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಹಳಿಯಲು ಬಿಜೆಪಿ ಜೊತೆ ಹೊಂದಾಣಿಕೆ ಆಗಿದ್ದ ಸತ್ಯ ಮುಚ್ಚಿಡುವುದು ಏಕೆ? ಚುನಾವಣೆ ನಂತರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ ದೇವೇಗೌಡರನ್ನು ಹಣಿಯಲು ಪ್ರಯತ್ನ ಮಾಡಲಿಲ್ಲವೇ? ಅವರಿಗೆ ಒಂದು ಒಳ್ಳೆಯ ಖಾತೆಯನ್ನು ನೀಡದೆ ಅವಮಾನಿಸಲಿಲ್ಲವೇ?
ಒಳ ಒಪ್ಪಂದದ ಬಗ್ಗೆ ಬೇರೆ ಪಕ್ಷಕ್ಕೆ ಬೆರಳು ತೋರಿಸುವ ಮೊದಲು ಜೆಡಿಎಸ್ ಆತ್ಮಾವಲೋಕನ ಮಾಡಿಕೊಳ್ಳಲಿ. ಕಳೆದ 3 ವಿಧಾನಸಭಾ ಚುನಾವಣೆಯಲ್ಲಿ ಮಲ್ಲೇಶ್ವರಂ ಕ್ಷೇತ್ರದಲ್ಲಿ ಇಂದಿನ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದವರಿಗೆ ಜೆಡಿಎಸ್ ಬಿ ಫಾರಂ ನೀಡಿದ್ದು ಸುಳ್ಳೇ? ಇಂತಹ ಹತ್ತಾರು ಒಳ ಒಪ್ಪಂದಗಳು ನಡೆದಿಲ್ಲವೇ?
ಜೆಡಿಎಸ್-ಬಿಜೆಪಿ ಜೊತೆ ಅಧಿಕಾರಕ್ಕಾಗಿ ಜೊತೆಯಾಗುತ್ತಿರುವುದು ಇದು ಮೊದಲೇನಲ್ಲ. ಹಿಂದೆ ಹೆಚ್ಡಿಕೆ ಮತ್ತು ಚೆಲುವರಾಯಸ್ವಾಮಿ ತಮ್ಮ ಲೋಕಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದಾಗ ಬಿಜೆಪಿ ಹೊಂದಾಣಿಕೆ ನಡುವೆಯೂ ಸೋತಿದ್ದೇಕೆ?
ಜೆಡಿಎಸ್ ಬಿಜೆಪಿಯ ಬಿ-ಟೀಮ್ ಎಂಬ ಹೇಳಿಕೆಗೆ ಅಧಿಕೃತ ಮುದ್ರೆ ಒತ್ತಿದ, ಸೈದ್ಧಾಂತಿಕ ವಿಚಾರಗಳಿಗೆ ಎಳ್ಳು ನೀರು ಬಿಟ್ಟ ಆ ಪಕ್ಷದ ಎಲ್ಲಾ ಇರುವ, ಹೋಗುವ ನಾಯಕರಿಗೆ ಅಭಿನಂದನೆಗಳು ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಲೇವಡಿ ಮಾಡಿದ್ದಾರೆ.
ಬಿಜೆಪಿಯ ಈಶ್ವರಪ್ಪ ಮತ್ತು ಹೆಚ್.ವಿಶ್ವನಾಥ್ ಯಾರದ್ದೋ ಬೆಂಕಿಯಲ್ಲಿ ಮೈ ಕಾಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇವರೂ ಸೋಲನ್ನು ಕಂಡವರೆ. ಸಿದ್ದರಾಮಯ್ಯ ಅವರನ್ನು ಟೀಕಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಬಿಟ್ಟು ಜನಸಾಮಾನ್ಯರ ತಲುಪುವ ಪ್ರಯತ್ನ ಮಾಡಲಿ.
ಇತಿಹಾಸ ಮರೆಮಾಚಲು ಯಾರಿಗೂ ಸಾಧ್ಯವಿಲ್ಲ. ಅವಕಾಶವಾದ ರಾಜಕಾರಣ ಮಾಡುವರು ಒಳ ಒಪ್ಪಂದ ಹಿಂದೆಯೂ ಮಾಡಿದ್ದಾರೆ, ಇಂದೂ ಮಾಡುತ್ತಾರೆ, ಮುಂದೆಯೂ ಮಾಡುತ್ತಾರೆ. ಸಿದ್ದರಾಮಯ್ಯ ಅವರನ್ನು, ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನಾಯಕರು ಕನ್ನಡಿಯ ಮುಂದೆ ನಿಂತು ಅವರ ಆತ್ಮಸಾಕ್ಷಿಯನ್ನು ಒಮ್ಮೆ ಪ್ರಶ್ನೆ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ಛಾಟಿ ಬೀಸಿದೆ.
ಕಾಂಗ್ರೆಸ್ ಆರೋಪಕ್ಕೆ ಜೆಡಿಎಸ್ನ ರಮೇಶ್ ಗೌಡ ತಿರುಗೇಟು
ಜೆಡಿಎಸ್ ವರಿಷ್ಠರನ್ನು ಟೀಕಿಸಿದ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು, ತಾವು ವಿಧಾನಪರಿಷತ್ನ ಮಾಜಿ ಸದಸ್ಯ ಎಂದು ಬರೆದುಕೊಂಡಿದ್ದಾರೆ. ಜೆಡಿಎಸ್ ಅನ್ನು ಟೀಕಿಸುವ ಮುನ್ನ ರಮೇಶ್ ಅದನ್ನು ತೆಗೆದು ಹಾಕುವುದು ಸೂಕ್ತ. ಏನು ಆಗಿರದ ರಮೇಶ್ ಬಾಬು ಅವರನ್ನು ಪರಿಷತ್ ವರೆಗೆ ತೆಗೆದುಕೊಂಡು ಹೋಗಿದ್ದ ಜೆಡಿಎಸ್. ಈಗ ಜೆಡಿಎಸ್ ವಿರುದ್ಧ ಮಾತಾಡುವಾಗ, ಜೆಡಿಎಸ್ನಿಂದ ಪ್ರಾಪ್ತವಾಗಿದ್ದ ಸ್ಥಾನಮಾನಗಳನ್ನು ಉಲ್ಲೇಖಿಸುವುದು ಅಪರಾಧವೇ ಸರಿ.
ತೀರ ಇತ್ತೀಚಿನ ವರೆಗೆ ಜೆಡಿಎಸ್ ಮತ್ತು ನಾಯಕರ ಪರಮ ಪ್ರತಿಪಾದಕರಾಗಿದ್ದ ನೀವು, ಅಧಿಕಾರ ಅರಸಿ ಕಾಂಗ್ರೆಸ್ ಸೇರಿದ್ದೀರಿ. ಅದೇ ಅಧಿಕಾರಕ್ಕಾಗಿ ಈಗ ಸಿದ್ದರಾಮಯ್ಯ ಅವರ ಆರಾಧನೆಯಲ್ಲಿ ತೊಡಗಿ, ಎಲ್ಲವನ್ನೂ ನೀಡಿದ ಜೆಡಿಎಸ್ ಮತ್ತು ನಾಯಕರ ವಿರುದ್ಧ ಅರುಚುತ್ತಿದ್ದೀರಿ. ನಮ್ಮ ಜೊತೆಗೆ ನಮ್ಮ ಪಕ್ಷದಲ್ಲಿದ್ದ ನಿಮ್ಮದು ಅದೆಂಥ ಅವಕಾಶವಾದವಿರಬಹುದು ಎಂದು ನನಗೆ ಆಶ್ಚರ್ಯವಾಗುತ್ತಿದೆ.
ಜೆಡಿಎಸ್ ನಲ್ಲಿ ಪರಿಷತ್ ಟಿಕೆಟ್ ಕೈತಪ್ಪುತ್ತದೆ ಎಂಬ ಸುಳಿವು ಸಿಕ್ಕಾಗ, ತಮ್ಮ ಸಿದ್ಧಾಂತಗಳನ್ನೆಲ್ಲ ಮರೆತು ಬಿಜೆಪಿ ಸೇರಲು ಮುಂದಾಗಿದ್ದ ನೀವು ಅಲ್ಲಿ ಅವಕಾಶ ಸಾಧ್ಯವಿಲ್ಲ ಎಂದು ಗೊತ್ತಾದಾಗ ಕಾಂಗ್ರೆಸ್ ಸೇರಿದಿರಿ. ಅದಕ್ಕೂ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂತೋಷ್ ರವರನ್ನು ಭೇಟಿಯಾಗಿದ್ದು ಗುಟ್ಟೇನಲ್ಲ.
ಅಲ್ಲಿ ಅವಕಾಶವಾಗಲಿಲ್ಲ ಇಲ್ಲಿ ಸೀಟು ಸಿಗಲ್ಲ ಎಂಬ ಕಾರಣಕ್ಕೆ ಕೊನೆಗೆ ಮುಳುಗುವ ಕಾಂಗ್ರೆಸ್ ಎಂಬ ಹಡಗನ್ನು ಹತ್ತಿದಿರಿ. ಆದರೆ ಅಲ್ಲಿಯೂ ಕೂಡ ದಕ್ಕಿದ್ದು ಶೂನ್ಯ. ನಿಮ್ಮ ಬುದ್ಧಿವಂತಿಕೆಯನ್ನು ಈಗ ತಾವಿರುವ ಪಕ್ಷದ ನಾಯಕರನ್ನು ಅಪ್ಪಿಕೊಳ್ಳಲು ಜೆಡಿಎಸ್ ಅನ್ನು ಟೀಕಿಸುವ ನೀವು ಒಮ್ಮೆ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ. ಇದಕ್ಕೆ ಉತ್ತರ ನಿಮಗೆ ಸ್ವಯಂವೇದ್ಯವಾಗುತ್ತದೆ. ಯಾರನ್ನೋ ಓಲೈಸಲು ನಿಮಗೊಂದು ‘ಐಡೆಂಟಿಟಿ’ ಕೊಟ್ಟ ಪಕ್ಷವನ್ನು ತೆಗಳುವುದು ನಿಮಗೆ ಶೋಭೆ ಅಲ್ಲ. ಗಾಳಿ ಬಂದ ಕಡೆ ತೂರಿಕೊಳ್ಳುವ ಜಾಯಮಾನ ನಿಮ್ಮದು ಎಂಬುದು ಗೊತ್ತಾಗುತ್ತದೆ. ನಿಮ್ಮ ನಿಲುವಿನ ಬಗ್ಗೆ ಮರುಕವಿದೆ ಎಂದು ಜೆಡಿಎಸ್ ಮುಖಂಡ ರಮೇಶಗೌಡ ವಾಗ್ದಾಳಿ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel