ಹಾಸನ ಬಳಿ ಹೆದ್ದಾರಿ ಅಪಘಾತ, ಅವಳಿ ಮಕ್ಕಳ ದಾರುಣ ಸಾವು
ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂಬದಿಯಿಂದ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅವಳಿ ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ನಗರದ ಹೊರವಲಯದಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಅವಳಿ ಕಂದಮ್ಮಗಳ ದೇಹಗಳು ಛಿದ್ರ ಛಿದ್ರಗೊಂಡಿದ್ದು, ತಂದೆ-ತಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರಣತಿ (3) ಹಾಗೂ ಪ್ರಣವ್(3) ಮೃತಪಟ್ಟ ಅವಳಿ ಮಕ್ಕಳಾಗಿದ್ದು, ಶಿವಾನಂದ್ ಹಾಗೂ ಪತ್ನಿ ಜ್ಯೋತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವಳಿ ಮಕ್ಕಳಿಬ್ಬರೂ ಸುಮಾರು ಎರಡು ಕಿಲೋಮೀಟರ್ವರೆಗೆ ಲಾರಿ ಚಕ್ರಕ್ಕೆ ಸಿಲುಕಿಕೊಂಡೇ ಇದ್ದರಿಂದ ಅವರ ದೇಹ ಛಿದ್ರವಾಗಿದೆ. ಪ್ರಣತಿ ಎಂಬ ಮಗುವಿನ ದೇಹ ಗುರುತೂ ಕೂಡ ಸಿಗದಂತಾಗಿದೆ.
ಲಾರಿ ಚಾಲಕನು ಮದ್ಯಪಾನ ಮಾಡಿ ಅಜಾಗರೂಕತೆಯಿಂದ ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅಪಘಾತವೆಸಗಿದ ಲಾರಿ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಹಾಸನ ಸಂಚಾರ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ..
ಪೋಷಕರಾದ ಶಿವಾನಂದ್ ಹಾಗೂ ಜ್ಯೋತಿ ತೀವ್ರವಾಗಿ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.








