ಜಿನೀವಾ : ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ವೈರಸ್ ಹರಡುವಿಕೆ ತಡೆಯೋಕೆ ಸದ್ಯ ಇರುವ ಏಕೈಕ ಮಾರ್ಗವೆಂದರೇ ಲಾಕ್ ಡೌನ್ ಮಾತ್ರ. ಕೊರೊನಾ ಪೀಡಿತ ಜಗತ್ತಿನ ಬಹುತೇಕ ರಾಷ್ಟ್ರಗಳು 2 ತಿಂಗಳಿಗೂ ಹೆಚ್ಚು ಕಾಲ ಸಂಪೂರ್ಣ ಸ್ತಬ್ಧ ಆಗಿವೆ. ಇದೀಗ ಹಲವು ದೇಶಗಳು ಲಾಕ್ ಡೌನ್ ಅನ್ನು ಕೊಂಚ ಕೊಂಚವಾಗಿ ಸಡಿಲಿಸುತ್ತಾ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡ್ತಿವೆ. ಅದೇ ರೀತಿ ಭಾರತದಲ್ಲೂ ಮೇ 17ರ ಬಳಿಕ ಲಾಕ್ ಡೌನ್ ತೆರವು ಆಗುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತಿವೆ. ಹೀಗೆ ಹಲವು ರಾಷ್ಟ್ರಗಳು ಲಾಕ್ ಡೌನ್ ಸಡಿಲಿಕೆ ಮಾಡುತ್ತಿರೋದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಆತಂಕ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿರುವ ಡಬ್ಲ್ಯೂ ಎಚ್ ಓ ನಿರ್ದೇಶಕ ಟೆಡ್ರೂಸ್ ಗೆಬ್ರೆಯಸ್, ಲಾಕ್ ಡೌನ್ ನಿಯಮಗಳನ್ನು ಸಡಿಲಿಕೆ ಮಾಡಿದ ಬಳಿಕ ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸೋಂಕು ತೀವ್ರಗೊಂಡಿದೆ. ಸೋಂಕು ಪ್ರಕರಣಗಳು ಕಡಿಮೆಯಿದ್ದಂತಹ ಜರ್ಮನಿ ಹಾಗೂ ದಕ್ಷಿಣಾ ಕೊರಿಯಾ ದೇಶಗಳಲ್ಲೂ ಕೊರೊನಾ ಕೇಸ್ ಗಳು ಹೆಚ್ಚಾಗಿವೆ. ಲಾಕ್ ಡೌನ್ ಸಡಿಲಿಕೆ ಮಾಡಿದ ಬಳಿಕ ಸೋಂಕು ವ್ಯಾಪಕವಾಗಿ ಹಬ್ಬಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಲಾಕ್ ಡೌನ್ ಸಡಿಲಿಕೆ ಮಾಡಿ ಚಟುವಟಿಕೆಗಳನ್ನು ಆರಂಭಿಸುವ ಎಲ್ಲ ದೇಶಗಳು ತೀವ್ರ ಎಚ್ಚರಿಕೆಯಿಂದ ಇರಬೇಕು ಎಂದು ಡಬ್ಲ್ಯೂ ಎಚ್ ಓ ಹೇಳಿದೆ. ಸೋಂಕು ಸಣ್ಣ ಪ್ರಮಾಣದಲ್ಲಿದ್ದರೂ ಅದು ಮತ್ತೆ ವ್ಯಾಪಕವಾಗಿ ಹರಡುವ ಬಗ್ಗೆ ಯಾವುದೇ ಸಂಶಯವಿಲ್ಲ. ಲಾಕ್ ಡೌನ್ ಬಳಿಕ ಎರಡನೇ ಅಲೆ ಏಳುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.








