ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನ ಗಿರಿನಗರದಲ್ಲಿ ಸಕಾಲಕ್ಕೆ ಆಂಬುಲೆನ್ಸ್ ಬಾರದೆ, ಮನೆಯ ಮುಂದೆಯ ರಸ್ತೆಯಲ್ಲಿಯೇ ಕೊರೊನಾ ಸೋಂಕಿತರೊಬ್ಬರು ಬಲಿಯಾದ ಬೆನ್ನಲ್ಲೆ ಇಂದು ಅಂತಹದೇ ಅಮಾನವೀಯ ಘಟನೆ ನಡೆದಿದೆ.
ದೇವನಹಳ್ಳಿ ಮೂಲದ ವೃದ್ದೆಗೆ ಉಸಿರಾಟದ ಸಮಸ್ಯೆ ಬಳಲುತ್ತಿದ್ದರು. ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಉಸಿರಾಟದ ಸಮಸ್ಯೆ ಹೆಚ್ಚಾದ ಕಾರಣ ವೃದ್ದೆಯನ್ನು ದೇವನಹಳ್ಳಿಯ ಕೋವಿಡ್ ಆಸ್ಪತ್ರೆಗೆ ಕರೆದೊಯ್ದರು ದಾಖಲಿಸಿಕೊಳ್ಳಲಿಲ್ಲ ಎನ್ನಲಾಗಿದೆ. ನಂತರ ಸಂಬಂಧಿಕರು ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರಿಗೆ ಬೆಳಗಿನ ಜಾವ 4ಗಂಟೆಗೆ ಕರೆದುಕೊಂಡು ಬಂದಿದ್ದಾರೆ. ಮೊದಲು ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ಕೇಂದ್ರಕ್ಕೆ
ಕರೆದೊಯ್ದರೂ ಬೆಡ್ ಇಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ವೃದ್ಧೆಯನ್ನು ದಾಖಲು ಮಾಡಿಕೊಳ್ಳಲಿಲ್ಲ. ಕೊನೆಗೆ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದರೂ ಅಲ್ಲೂ ದಾಖಲು ಮಾಡಿಕೊಂಡಿಲ್ಲ. ಹಲವು ಆಸ್ಪತ್ರೆಗಳ ಬಾಗಿಲು ಸುತ್ತಿ ವಾಪಸ್ ವಿಕ್ಟೋರಿಯಾ ಆಸ್ಪತ್ರೆಗೆ ಮತ್ತೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯ ಗೇಟ್ ಮುಂದೆ ಅಂಬುಲೆನ್ಸ್ ನಿಂತಿದ್ದಾಗ ಉಸಿರಾಟದ ಸಮಸ್ಯೆ ಹೆಚ್ಚಾಗಿ ವೃದ್ದೆ ಮೃತಪಟ್ಟಿದ್ದಾರೆ.
ಇದೀಗ ವೃದ್ದೆಯ ಜೀವ ಹೋದ ಬಳಿಕ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಬಲಿಯಾಗುವವರವ ಸಂಖ್ಯೆ ಕೂಡ ಬೆಳೆಯುತ್ತಿದೆ. ಆದರೆ ಆಸ್ಪತ್ರೆಗಳ ಅಮಾನವೀಯ ವರ್ತನೆಗೆ ಇನ್ನೆಷ್ಟು ಬಲಿ ಬೀಳಬೇಕೋ ಗೊತ್ತಿಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತು ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.








