ಮುಂಬೈ : ಇದೇ ತಿಂಗಳ 19 ರಿಂದ ದುಬೈನಲ್ಲಿ ಐಪಿಎಲ್ ಕಲವರ ಶುರುವಾಗಲಿದೆ. ಈಗಾಗಲೇ ಐಪಿಎಲ್ ನ ಎಲ್ಲ ತಂಡಗಳು ಸಮರಾಭ್ಯಾಸ ಆರಂಭಿಸಿವೆ. ಆದರೆ ಇದುವರೆಗೂ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿಲ್ಲ. ಸದ್ಯ ಈ ಕುರಿತು ಬಿಸಿಸಿಐ ಅಧ್ಯಕ್ಷ ಗಂಗೂಲಿ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತ ಬಿಸಿಸಿಐ ಟೂರ್ನಿಯ ವೇಳಾಪಟ್ಟಿಯನ್ನು ಸೆ.4ರ ಶುಕ್ರವಾರದಂದು ಬಿಡುಗಡೆ ಮಾಡಲಿದೆ ಎಂದಿದ್ದಾರೆ.
ಮಾಧ್ಯಮ ವರದಿಗಳ ಅನ್ವಯ ಟೂರ್ನಿಯ ವೇಳಾಪಟ್ಟಿಯನ್ನು ಈ ಹಿಂದೆಯೇ ಬಿಡುಗಡೆ ಮಾಡಲು ಬಿಸಿಸಿಐ ಸಿದ್ಧತೆ ನಡೆಸಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ 12 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಶೆಡ್ಯೂಲ್ ಬಿಡುಗಡೆಯನ್ನು ಮುಂದೂಡಿತ್ತು. ಆದರೆ ಸದ್ಯ ಸಿಎಸ್ ಕೆ ತಂಡದ ಸದಸ್ಯರು ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದು, ಶೆಡ್ಯೂಲ್ ಬಿಡುಗಡೆಗೆ ಮುಹೂರ್ತ ನಿಗದಿ ಮಾಡಿದೆ.








