ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಅಂತ್ಯಗೊಂಡಿದ್ದು, ನಿರೀಕ್ಷೆಯಂತೆಯೇ ನಾಯಕತ್ವ ಬದಲಾವಣೆಯ ಚರ್ಚೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಇದರೊಂದಿಗೆ ದಿವಂಗತ ದೇವರಾಜ ಅರಸು ಅವರ ಸುದೀರ್ಘ ಆಡಳಿತದ ದಾಖಲೆಯನ್ನು ಸಿದ್ದರಾಮಯ್ಯ ಅವರು ಸರಿಗಟ್ಟುವುದು ಮತ್ತು ಮುರಿದು ಮುನ್ನಡೆಯುವುದು ಇದೀಗ ಅಧಿಕೃತಗೊಂಡಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸವು ಕೇವಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಗೆ ಸೀಮಿತವಾಯಿತೇ ವಿನಃ, ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕ ಮಾತುಕತೆಗೆ ಅವಕಾಶ ಸಿಗಲಿಲ್ಲ. ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದರಿಂದ, ರಾಜ್ಯ ಕಾಂಗ್ರೆಸ್ ನಾಯಕತ್ವದ ಹಗ್ಗಜಗ್ಗಾಟಕ್ಕೆ ಜನವರಿ ಮೊದಲ ವಾರದವರೆಗೂ ಬ್ರೇಕ್ ಬಿದ್ದಿದೆ.
ಅರಸು ದಾಖಲೆ ಮುರಿಯುವ ಹೊಸ್ತಿಲಲ್ಲಿ ಸಿದ್ದರಾಮಯ್ಯ
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದಿವಂಗತ ದೇವರಾಜ ಅರಸು ಅವರು ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದರು. ಇದೀಗ ಆ ಐತಿಹಾಸಿಕ ದಾಖಲೆಯನ್ನು ಸರಿಗಟ್ಟಲು ಮತ್ತು ಅದನ್ನು ಹಿಂದಿಕ್ಕಲು ಸಿದ್ದರಾಮಯ್ಯ ಅವರಿಗೆ ಕಾಲಾವಕಾಶ ಒಲಿದು ಬಂದಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಜನವರಿ 6ರವರೆಗೂ ನಾಯಕತ್ವ ಬದಲಾವಣೆ ಅಸಾಧ್ಯ ಎಂಬುದು ಸ್ಪಷ್ಟವಾಗಿರುವುದರಿಂದ, ಸಿದ್ದರಾಮಯ್ಯ ಅವರು ರಾಜ್ಯದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದು ಅವರ ರಾಜಕೀಯ ಜೀವನದ ಮೈಲಿಗಲ್ಲಾಗಲಿದೆ.
ಜನವರಿ 6 ರ ನಂತರ ಹೈಕಮಾಂಡ್ ಕೋರ್ಟ್ ನಲ್ಲಿ ಚೆಂಡು
ರಾಜ್ಯ ನಾಯಕತ್ವದ ಗೊಂದಲಗಳಿಗೆ ತೆರೆ ಎಳೆಯಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಆದರೆ, ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸದ ಕಾರಣ, ಈ ಪ್ರಕ್ರಿಯೆ ಜನವರಿ 6ರ ನಂತರ ನಡೆಯಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರಿಗೂ ಸ್ಪಷ್ಟ ಸಂದೇಶ ರವಾನಿಸಿದ್ದು, ರಾಹುಲ್ ಗಾಂಧಿ ಮರಳಿದ ಬಳಿಕವಷ್ಟೇ ದೆಹಲಿಗೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲಿಯವರೆಗೆ ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡದಂತೆ ಅಥವಾ ಗೊಂದಲ ಸೃಷ್ಟಿಸದಂತೆ ತಾಕೀತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಉಭಯ ಬಣಗಳು
ಒಂದೆಡೆ ಸಿದ್ದರಾಮಯ್ಯ ಅವರು ಅರಸು ದಾಖಲೆ ಮುರಿಯುವ ಸಂಭ್ರಮದಲ್ಲಿದ್ದರೆ, ಅವರ ಅಭಿಮಾನಿಗಳು ಮತ್ತು ಹಿಂಬಾಲಕರು ರಾಜ್ಯದ ವಿವಿಧೆಡೆ ಅಹಿಂದ ಸಮಾವೇಶ ಮತ್ತು ನಾಟಿ ಕೋಳಿ ಊಟದ ಕೂಟಗಳನ್ನು ಆಯೋಜಿಸುವ ಮೂಲಕ ಪರೋಕ್ಷ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಇನ್ನೊಂದೆಡೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಹಂಚಿಕೆ ಸೂತ್ರದ ಮೇಲೆ ಕಣ್ಣಿಟ್ಟಿದ್ದು, ಸಂಕ್ರಾಂತಿಯ ನಂತರದ ರಾಜಕೀಯ ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ. ಹೈಕಮಾಂಡ್ ಬುಲಾವ್ ಅಧಿಕಾರ ಬದಲಾವಣೆಗೋ ಅಥವಾ ಸಂಪುಟ ಪುನಾರಚನೆಗೋ ಎಂಬುದು ಸದ್ಯದ ಯಕ್ಷಪ್ರಶ್ನೆಯಾಗಿದೆ.
ದೆಹಲಿಯಲ್ಲಿ ದಲಿತ ಸಿಎಂ ಅಸ್ತ್ರ ಪ್ರಯೋಗ
ನಾಯಕತ್ವ ಬದಲಾವಣೆಯ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆಯೇ, ದಲಿತ ಮುಖ್ಯಮಂತ್ರಿ ಕೂಗು ಕೂಡ ದೆಹಲಿ ಅಂಗಳ ತಲುಪಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಪರವಾಗಿ ದಲಿತ ಮುಖಂಡರ ದಂಡೇ ದೆಹಲಿಯಲ್ಲಿ ಬೀಡುಬಿಟ್ಟಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಮುಂದೆ ಅಭಿಯಾನ ನಡೆಸಿರುವ ಮುಖಂಡರು, ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಿಸುವುದಾದರೆ, ಆ ಸ್ಥಾನಕ್ಕೆ ದಲಿತ ನಾಯಕರನ್ನೇ ನೇಮಿಸಬೇಕು. ಹಿರಿಯ ನಾಯಕ ಹಾಗೂ ಸಮರ್ಥರಾಗಿರುವ ಡಾ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಬೇಕು ಎಂದು ಸೋನಿಯಾ ಗಾಂಧಿ, ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಅವರಲ್ಲಿ ಹಕ್ಕೊತ್ತಾಯ ಮಂಡಿಸಿದ್ದಾರೆ. ಇದು ಡಿ.ಕೆ. ಶಿವಕುಮಾರ್ ಅವರ ಸಿಎಂ ಕನಸಿಗೆ ಅಡ್ಡಗಾಲಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಒಟ್ಟಾರೆಯಾಗಿ, ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಸಂಕ್ರಾಂತಿ ನಂತರ ದೊಡ್ಡ ಮಟ್ಟದ ರಾಜಕೀಯ ಧ್ರುವೀಕರಣ ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ ಅಲ್ಲಿಯವರೆಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಮತ್ತು ಐತಿಹಾಸಿಕ ದಾಖಲೆ ನಿರ್ಮಿಸುವುದು ಪಕ್ಕಾ ಆಗಿದೆ.








