ದೇವರ ನಾಡು ಕೇರಳ ಕೊರೋನಾ ಸೋಂಕಿನಿಂದ ಭಾಗಶಃ ಸ್ತಬ್ಧವಾಗಿದೆ. ಸೋಂಕು ಪೀಡಿತರ ಸಂಖ್ಯೆ 15ಕ್ಕೆ ಏರಿಕೆ ಯಾಗಿದ್ದು ರಾಜ್ಯದಾದ್ಯಂತ ಹಲವು ನಿರ್ಬಂಧಗಳನ್ನು, ಕಠಿಣ ಕ್ರಮಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.
ಶಾಲಾ ಕಾಲೇಜು, ಚಿತ್ರ ಮಂದಿರಗಳನ್ನು ಮಾರ್ಚ್ 31ರವರೆಗೆ ಮುಚ್ಚಲು ಆದೇಶಿಸಲಾಗಿದೆ. 1ರಿಂದ 7ನೇ ತರಗತಿಯ ವರೆಗಿನ ಸಿಬಿಎಸ್’ಇ, ಐಸಿಎಸ್’ಇ ಶಾಲೆಗಳ ಪರೀಕ್ಷೆಗಳನ್ನು ಮುಂದುವರಿಸದಂತೆ ಸೂಚಿಸಲಾಗಿದ್ದು, ಹತ್ತನೇ ತರಗತಿ, ಪದವಿ ಪೂರ್ವ, ವೋಕೇಷನಲ್ ಹೈಯರ್ ಸೆಕೆಂಡರಿ ಕೋರ್ಸ್ ಗಳ ಪರೀಕ್ಷೆಗಳು ಮಾತ್ರ ವೇಳಾಪಟ್ಟಿಯಂತೆ ನಡೆಯಲಿದೆ.
ದೇಗುಲ, ಚರ್ಚ್, ಮಸೀದಿಗಳಲ್ಲಿಬಯಾವುದೇ ಧಾರ್ಮಿಕ ಉತ್ಸವಗಳು ಬೇಡ ಎಂದು ಸಾರ್ವಜನಿಕರಲ್ಲಿ ಸಿಎಂ ಮನವಿ ಮಾಡಿದ್ದಾರೆ. ಮದುವೆ ಮತ್ತು ಇತರ ಸಮಾರಂಭದಲ್ಲೂ ಹೆಚ್ಚು ಜನರು ಸೇರದಂತೆ ವಿನಂತಿಸಿದ್ದಾರೆ. ಸರಕಾರಿ ಪ್ರಾಯೋಜಿತ ಎಲ್ಲಾ ಕಾರ್ಯ ಕ್ರಮಗಳನ್ನು ಮುಂದೂಡಲಾಗಿದ್ದು, ಸರಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಿ ವ್ಯವಸ್ಥೆ ಮಾರ್ಚ್ 31ರವರೆಗೆ ರದ್ದುಗೊಳಿಸಲಾಗಿದೆ.