ಚಿತ್ರದುರ್ಗ: ಹಲವಾರು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ (Leopard) ಕೊನೆಗೂ ಬೋನಿಗೆ ಬಿದ್ದಿರುವ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದು ತಿಂಗಳಿಂದ ಚಿರತೆಯು ಕಡ್ಲೆಗುದ್ದು, ಸಿದ್ದಾಪುರ, ಕುರುಬರ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ನಿದ್ದೆಗೆಡಿಸಿತ್ತು. ಹೀಗಾಗಿ ಜನರು ಕೈಯಲ್ಲಿ ಜೀವ ಹಿಡಿದು ಜೀವನ ಸಾಗಿಸುವಂತಾಗಿತ್ತು. ಚಿರತೆಯ್ನು ಇಂದು ಬೋನಿಗೆ ಹಾಕುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಈ ಚಿರತೆ ಹಲವು ಬಾರಿ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಸಂಜೆಯಾದರೆ ಗ್ರಾಮಸ್ಥರು ಮನೆಯಿಂದ ಹೊರ ಬರಲು ಸಹ ಭಯ ಪಡುವ ವಾತಾವರಣವಿತ್ತು.
ಹೀಗಾಗಿ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನನ್ನು ಇಟ್ಟಿದ್ದರು. ಶನಿವಾರ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದೆ. ಚಿರತೆಯನ್ನು ಸುರಕ್ಷಿತವಾಗಿ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಶಿಫ್ಟ್ ಮಾಡಲಾಗಿದೆ.