ಭಾರಿ ಮಳೆ – ಬೆಳಗಾವಿಯ ಹಲವು ಗ್ರಾಮದ ಸಂಪರ್ಕ ಸೇತುವೇ ಮುಳುಗಡೆ..
ಕಳೆದ ಮೂರು ದಿನಗಳಿಂದ ಗಡಿ ಜಿಲ್ಲೆ ಬೆಳಗಾವಿ ಸೇರಿ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಘಟಪ್ರಭಾ, ಮಲಪ್ರಭಾ ಹಾಗೂ ಹಿರಣ್ಯಕೇಶಿ ನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದೆ. ಹಿಡಲಕಲ್ ಜಲಾಶಯ ಸೇರಿದಂತೆ ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿ ಸೇರಿ ಒಟ್ಟು 37 ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಹರಿಬಿಡಲಾಗಿದೆ.
ಇದರಿಂದ ಗೋಕಾಕ್ ಮತ್ತು ಮೂಡಲಗಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಅಲ್ಲದೇ ಪಶ್ಚಿಮಘಟ್ಟಗಳು, ಕಣಕುಂಬಿ ಹಾಗೂ ಖಾನಾಪುರ ಭಾಗದಲ್ಲಿ ಅಧಿಕ ಮಳೆ ಸುರಿಯುತ್ತಿರುವ ಪರಿಣಾಮ ಮಲಪ್ರಭಾ ನದಿಯ ನೀರಿನ ಒಳ ಹರಿವು ಹೆಚ್ಚಳವಾಗಿದೆ.
ಕೃಷ್ಣಾ, ವೇದಗಂಗಾ, ದೂದ್ ಗಂಗಾ ಹಾಗೂ ಹಿರಣ್ಯಕೇಶಿ ನದಿ ನೀರಿನ ಮಟ್ಟವೂ ಹೆಚ್ಚಳವಾಗಿದ್ದು, ಇದರಿಂದ ಜಿಲ್ಲೆಯ ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಯ ಜತ್ರಾಟ್ ಭೀವಶಿ, ಅಕ್ಕೋಳ- ಸಿದ್ನಾಳ ಗ್ರಾಮದ ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ.
ನಿರಂತರ ಮಳೆಗೆ ಬೆಳಗಾವಿ ಜಿಲ್ಲೆಯಲ್ಲಿ 35 ಕ್ಕೂ ಅಧಿಕ ಮನೆಗಳು ಕುಸಿದಿದ್ದು, ನದಿಯ ಒಳಹರಿವು ಸಹ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ.








