ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ 6 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯ ಬಗ್ಗೆ ಚಾಲಕ ಮಾತನಾಡಿದ್ದಾನೆ.
ನನ್ನ ಮುಂದಿದ್ದ ಕಾರಿನಲ್ಲಿದ್ದವರನ್ನು ಉಳಿಸಲು ಹೋಗಿ ಹೀಗಾಯ್ತು ಎಂದು ಲಾರಿ ಚಾಲಕ ಆರೀಫ್ ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಆರಿಫ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾಬಸ್‌ಪೇಟೆಯಿಂದ ಬೆಂಗಳೂರಿನ ಕಡೆಗೆ ನಾನು ಬರುತ್ತಿದ್ದೆ. ನನ್ನ ಮುಂದಿನ ಕಾರನ್ನು ಸೇಫ್ ಮಾಡಲು ಹೋಗಿ ಹೀಗೆ ಆಗಿದೆ. ಲಾರಿ ಡಿವೈಡರ್ ದಾಟಿ ಮುಂದಿನ ರಸ್ತೆಗೆ ಪಲ್ಟಿ ಆಯಿತು. ನನ್ನ ಮುಂದಿನ ಕಾರಿನಿಂದಾಗಿ ಹೀಗೆ ಆಯ್ತು. ನನಗೆ ತುಂಬಾ ನೋವಾಗುತ್ತಿದೆ. ಅಲ್ಲಿ ನಂತರ ಏನಾಯಿತು ಎನ್ನುವುದು ಗೊತ್ತಿಲ್ಲ. ಕಾರಿನ ಮೇಲೆ ನನ್ನ ಲಾರಿ ಪಲ್ಟಿಯಾಗಿತ್ತು ಎಂದು ಬೇಸರದಲ್ಲಿ ಹೇಳಿದ್ದಾರೆ.
ನೆಲಮಂಗಲದ ಟಿ.ಬೇಗೂರು ಬಳಿಯ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Tumkur Bengaluru National Highway) ಇಂದು ಮಧ್ಯಾಹ್ನ (ಶನಿವಾರ) ನಡೆದ ಎರಡು ಕಾರು, ಎರಡು ಲಾರಿ ಹಾಗೂ ಸ್ಕೂಲ್ ಬಸ್ ನಡುವಿನ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ 6 ಜನ ಸಾವನ್ನಪ್ಪಿದ್ದಾರೆ.








