ಮುಂಬೈ : ಮಹಾರಾಷ್ಟ್ರದ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್, ಮಹಾರಾಷ್ಟ್ರ ಸರ್ಕಾರ ಕೊರೊನಾವನ್ನು ಎದುರಿಸುತ್ತಿರುವ ರೀತಿಯನ್ನು ಕೇರಳ ಮಾದರಿಗೆ ಹೋಲಿಸಿ ಟೀಕೆ ಮಾಡಿದ್ದರು. ಇದಕ್ಕೆ ಶಿವಸೇನಾ ತನ್ನ ಮುಖವಾಣಿ “ಸಾಮ್ನಾ”ದ ಸಂಪಾದಕೀಯದಲ್ಲಿ ತಿರುಗೇಟು ನೀಡಿದೆ. ಕೊರೊನಾ ವಿಚಾರದಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಅಪಪ್ರಚಾರಗಳೇ ಅದಕ್ಕೆ ತಿರುಗುಬಾಣವಾಗಲಿದೆ ಎಂದು ಶಿವಸೇನಾ ಹೇಳಿದೆ.
ಸಾಮ್ನಾ ಸಂಪಾದಕೀಯದಲ್ಲಿ..
‘ಪಾಟೀಲ್ ಅವರು ಕೇರಳ ಮಾದರಿಯನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ ಅನಿಸುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಸರ್ಕಾರದ ಮಾರ್ಗದರ್ಶಿಯನ್ನು ಪಾಲಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಜತೆಗಿನ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸುವುದೆಂದರೆ ಸಮಯ ವ್ಯರ್ಥಗೊಳಿಸಿದಂತೆ ಎಂದು ಅವರು ಭಾವಿಸಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ.
ಅಲ್ಲದೆ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸುವ ಬದಲು ಚಂದ್ರಕಾಂತ್ ಪಾಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಕೇರಳದಲ್ಲಿ ಪ್ರತಿಭಟನೆ ನಡೆಸಲಿ. ‘ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರತಿಪಕ್ಷವು ಏನಾದರೂ ಸಲಹೆಗಳನ್ನು ನೀಡುವುದಿದ್ದಲ್ಲಿ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಲಿ. ಹೀಗೆ ಮಾಡಲು ಪ್ರತಿಪಕ್ಷಕ್ಕೆ ಮುಜುಗರವಾಗುತ್ತದೆಯೇ ಅಥವಾ ಆತ್ಮವಿಶ್ವಾಸವಿಲ್ಲವೇ’ ಎಂದು ಸೇನಾ ಪ್ರಶ್ನಿಸಿದೆ.








