ಮುಂಬಯಿ: ಮಹಾರಾಷ್ಟ್ರ ಸರ್ಕಾರದ ಮಂತ್ರಿ ಮಂಡಲ ವಿಸ್ತರಣೆಯಾಗಿದ್ದು, 39 ಜನ ಶಾಸಕರು ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಚಿವರಾಗುವ ಕನಸು ಕಂಡಿದ್ದ ಹಲವು ಶಾಸಕರಿಗೆ ಸಹಜವಾಗಿ ನಿರಾಸೆಯಾಗಿದೆ. ಆದರೆ, ಶಾಸಕರೊಬ್ಬರು ಮಂತ್ರಿ ಮಾಡಿಲ್ಲವೆಂದು ರಾಜೀನಾಮೆ ನೀಡಿದ್ದಾರೆ. ಮಂತ್ರಿ ಸ್ಥಾನ ನೀಡದ್ದಕ್ಕೆ ಶಿವಸೇನೆಯ ಏಕನಾಥ್ ಶಿಂಧೆ (Eknath Shinde’s faction of Shiv Sena) ಬಣದ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಶಿವಸೇನೆಯ ಮೂರು ಬಾರಿ ಶಾಸಕರಾಗಿದ್ದ ನರೇಂದ್ರ ಭೋಂಡೇಕರ್ (Narendra Bhondekar)ಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಆದರೆ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ. ಹೀಗಾಗಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಭಂಡಾರ-ಪಾವನಿ (Bhandara-Pavani) ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅವರು ಪಕ್ಷಕ್ಕೆ ಮಾತ್ರ ರಾಜೀನಾಮೆ ನೀಡಿದ್ದಾರೆ. ಆದರೆ, ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿಲ್ಲ. ನರೇಂದ್ರ ಭೋಂಡೇಕರ್ ಅವರು ಶಿವಸೇನೆಯ ಉಪನಾಯಕ ಮತ್ತು ವಿದರ್ಭದ ಪಕ್ಷದ ಸಂಯೋಜಕರಾಗಿದ್ದರು. ಮಹಾಯುತಿ ಮೈತ್ರಿಕೂಟದ ಭಾಗವಾಗಿದ್ದ ಶಿವಸೇನೆ 62 ಸ್ಥಾನಗಳಲ್ಲಿ 47 ಸ್ಥಾನಗಳನ್ನು ಗೆದ್ದುಕೊಂಡಿತ್ತು.
39 ಮಂದಿ ಶಾಸಕರು ಮಹಾರಾಷ್ಟ್ರದ ಮಹಾಯುತಿ ಸರ್ಕಾರದ (Maharashtra Mahayuti Government) ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ನಾಗ್ಪುರದ ರಾಜಭವನದಲ್ಲಿ ನಡೆದ ಈ ಸಮಾರಂಭದಲ್ಲಿ 33 ಮಂದಿ ಕ್ಯಾಬಿನೆಟ್ ಸಚಿವರಾಗಿ (Cabinet Minister) 6 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.