ನವದೆಹಲಿ : ದೇಶದಲ್ಲಿ ಒಂದು ಕಡೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದರೇ, ಮತ್ತೊಂದೆಡೆ ಪೆಟ್ರೋಲ್- ಡೀಸೆಲ್ ಬೆಲೆ ಕೂಡ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಸದ್ಯ ದೇಶದಲ್ಲಿ ಕೊರೊನಾ ಕೇಸ್ ಗಳು 4.56 ಲಕ್ಷದ ಗಡಿ ದಾಟಿದೆ. ಇತ್ತ ತೈಲ ಬೆಲೆಯೂ ಕಳೆದ 18 ದಿನಗಳಿಂದಲೂ ಏರಿಕೆ ಆಗುತ್ತಲೇ ಇದೆ. ಈ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಟ್ವೀಟ್ ಗಳನ್ನು ಮಾಡಿರುವ ರಾಹುಲ್ ಗಾಂಧಿ, “ಕೊರೊನಾ ವೈರಸ್ ಮತ್ತು ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಮೋದಿ ಸರ್ಕಾರ ಅನ್ಲಾಕ್ ಮಾಡಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ 20 ಭಾರತೀಯ ಸೈನಿಕರ ಸಾವಿನ ನಂತರ ಮೋದಿಯವರು ಚೀನಾದೊಂದಿಗಿನ ಲಡಾಖ್ ಗಡಿ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆಯೂ ರಾಹುಲ್ ಗಾಂಧಿ ಪ್ರಶ್ನೆ ಎತ್ತಿದ್ದಾರೆ.
ಇನ್ನು ತೈಲ ಬೆಲೆ ಏರಿಕೆ ಪರಿಣಾಮ ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 79.76 ರೂ.ಗಳಾಗಿದ್ದರೆ, ಡೀಸೆಲ್ ಬೆಲೆ 0.48 ರೂ.ಗಳ ಏರಿಕೆಯ ನಂತರ ಲೀಟರ್ ಗೆ 79.88 ರೂ. ಆಗಿದೆ.








