ಮಹಾರಾಷ್ಟ್ರ : ತಾಯಿ ಹಣ ನೀಡದ ಕಾರಣಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದಿದೆ. 18 ವರ್ಷದ ಸರ್ವೇಶ್ ಇಂಗ್ಲೆ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಸರ್ವೇಶ್ ಇಂಗ್ಲೆಯ ತಂದೆ ಗಡ್ಚಿರೋಲಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸದ ಕಾರಣ ಹಲವು ದಿನಗಳಿಂದ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ಕಳೆದ ಗುರುವಾರ ಸರ್ವೇಶ್ ತನ್ನ ತಾಯಿಯ ಬಳಿ ಹೋಗಿ 200 ರೂ ನೀಡುವಂತೆ ಕೇಳಿದ್ದಾನೆ. ಆದರೆ, ತಾಯಿ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕ ತಾಯಿಯೊಂದಿಗೆ ಜಗಳವಾಡಿದ್ದಾನೆ.
ಇನ್ನು ತಾಯಿ ಹಣ ನೀಡಲು ನಿರಾಕರಿಸಿದ ಕಾರಣ ಯುವಕ ತಂದೆಗೆ ಕರೆ ಮಾಡಿ ತಂದೆಯ ಮೇಲೂ ಕೋಪ ತೋಡಿಕೊಂಡಿದ್ದಾನೆ. ಸ್ವಲ್ಪ ಸಮಯದ ಬಳಿಕ ತಂದೆ ಮಗನಿಗೆ ಕರೆ ಮಾಡಿ ಹಣವನ್ನು ಕಳುಹಿಸಿದ್ದೇನೆ ಎಂದು ಹೇಳಿದರು. ಆದರೆ ಅವನು ಹಣ ಬೇಡವೆಂದು ಹೇಳಿ ಫೋನ್ ಕಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಮೊದಲೇ 200 ರೂಪಾಯಿ ನೀಡದ ಕಾರಣ ಕೋಪದಿಂದ ಸರ್ವೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.








